ನವದೆಹಲಿ: ಉತ್ತರ ಪ್ರದೇಶದ ಘಾಜಿಯಾಬಾದ್ನಲ್ಲಿ 84 ವರ್ಷದ ನಿವೃತ್ತ ಬ್ಯಾಂಕ್ ಮ್ಯಾನೇಜರ್ ಹಾಗೂ ಅವರ ಪತ್ನಿಯನ್ನು 12 ದಿನಗಳ ಕಾಲ ‘ಡಿಜಿಟಲ್ ಅರೆಸ್ಟ್’ ಹೆಸರಿನಲ್ಲಿ ಮಾನಸಿಕ ಒತ್ತಡಕ್ಕೆ ಒಳಪಡಿಸಿ ಸುಮಾರು 2.20 ಕೋಟಿ ರೂಪಾಯಿ ವಂಚಿಸಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಸೈಬರ್ ವಂಚಕರು ದೆಹಲಿಯ ದರಿಯಾಗಂಜ್ ಪೊಲೀಸ್ ಠಾಣೆಯ ಅಧಿಕಾರಿ, ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ಹಾಗೂ ನ್ಯಾಯಾಧೀಶರ ಸೋಗಿನಲ್ಲಿ ಕರೆ ಮಾಡಿ, 2023ರ ಕೆನರಾ ಬ್ಯಾಂಕ್ಗೆ ಸಂಬಂಧಿಸಿದ 538 ಕೋಟಿ ರೂಪಾಯಿ ದುರುಪಯೋಗ ಪ್ರಕರಣದಲ್ಲಿ ನಿಮ್ಮ ಹೆಸರು ಇದೆ ಎಂದು ನಂಬಿಸಿದ್ದಾರೆ. ಬಂಧನ ವಾರಂಟ್ ಹೊರಡಿಸಲಾಗಿದೆ ಎಂದು ಬೆದರಿಸಿ ಯಾರನ್ನೂ ಸಂಪರ್ಕಿಸದಂತೆ ಸೂಚಿಸಿ, ಪ್ರತಿದಿನ ನಾಲ್ಕರಿಂದ ಎಂಟು ಗಂಟೆಗಳ ಕಾಲ ವಿಡಿಯೊ ಕರೆ ಮೂಲಕ ನಕಲಿ ವಿಚಾರಣೆ ನಡೆಸಿದ್ದಾರೆ. ತನಿಖೆ ಪೂರ್ಣಗೊಂಡ ಬಳಿಕ ಹಣವನ್ನು ಹಿಂದಿರುಗಿಸಲಾಗುವುದು ಎಂದು ನಂಬಿಸಿ ಬ್ಯಾಂಕ್ ಖಾತೆಗಳು, ಚಿನ್ನ ಹಾಗೂ ಆಸ್ತಿಗಳ ಪರಿಶೀಲನೆ ನೆಪದಲ್ಲಿ ಎಲ್ಲಾ ಹಣವನ್ನು ಸರ್ಕಾರಿ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸುವಂತೆ ಸೂಚಿಸಿದ್ದಾರೆ. ವಾಟ್ಸಾಪ್ ಚಾಟ್ ಹಾಗೂ ಅಧಿಸೂಚನೆಗಳನ್ನು ಅಳಿಸುವಂತೆ ಹೇಳಿ ದಂಪತಿಯನ್ನು ನಿರಂತರ ಕಣ್ಗಾವಲಿನಲ್ಲಿ ಇರಿಸಿದ್ದಾರೆ. ಮೇ 22ರಿಂದ ಜೂನ್ 4ರವರೆಗೆ ಆರ್ಟಿಜಿಎಸ್ ಮೂಲಕ ಒಟ್ಟು 2,19,73,003 ರೂಪಾಯಿಗಳನ್ನು ಐದು ವಿವಿಧ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿಕೊಂಡಿದ್ದು, ಹಣ ಹೊಂದಿಸಲು ದಂಪತಿ ಸುಮಾರು 70 ಲಕ್ಷ ರೂಪಾಯಿ ಸಾಲವನ್ನೂ ಪಡೆದಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಬಳಿಕ ತಾವು ವಂಚನೆಗೆ ಒಳಗಾಗಿರುವುದನ್ನು ಅರಿತ ರಾಮ್ ಪ್ರಕಾಶ್ ಹುರಿಯಾ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 66ಡಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
