
ಕಾರ್ಕಳ: ರಾಜ್ಯ ಸರ್ಕಾರ ಕಾರ್ಕಳ ತಾಲೂಕು ಕೆಡಿಪಿ (ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಮಿತಿ) ಸದಸ್ಯರನ್ನು ನೇಮಕ ಮಾಡಿ ಹಲವು ತಿಂಗಳುಗಳು ಕಳೆದಿದ್ದರೂ, ಸಮಿತಿಯ ಅಧ್ಯಕ್ಷರಾಗಿರುವ ಕಾರ್ಕಳ ಶಾಸಕರು ಇದುವರೆಗೆ ಸಭೆ ಕರೆದಿಲ್ಲ ಎಂದು ಕೆಡಿಪಿ ನಾಮನಿರ್ದೇಶನ ಸದಸ್ಯ ಎಂ.ಪಿ. ಮೊಯಿದ್ದಿನಬ್ಬಾ ಆರೋಪಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ವಿವಿಧ ಅಭಿವೃದ್ಧಿ ಯೋಜನೆಗಳು ಹಾಗೂ 33ಕ್ಕೂ ಹೆಚ್ಚು ಇಲಾಖೆಗಳ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುತ್ತಿದ್ದು, ಅವುಗಳ ಪ್ರಗತಿಯನ್ನು ಕಾಲಕಾಲಕ್ಕೆ ಪರಿಶೀಲಿಸಿ ಪರಿಣಾಮಕಾರಿಯಾಗಿ ಜಾರಿಗೊಳಿಸಲು ಕೆಡಿಪಿ ಸಭೆಗಳು ಅತ್ಯಂತ ಅಗತ್ಯವಾಗಿವೆ ಎಂದು ಹೇಳಿದರು. ಆದರೆ ಸಮಿತಿಯ ಅಧ್ಯಕ್ಷರಾಗಿರುವ ಶಾಸಕರು ಈ ಜವಾಬ್ದಾರಿಯನ್ನು ನಿರ್ವಹಿಸದೇ ಇರುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕವಾಗಿದ್ದು, ಸರ್ಕಾರದಿಂದ ನಾಮನಿರ್ದೇಶಿತರಾದ ಸದಸ್ಯರನ್ನು ಕಡೆಗಣಿಸಿ ಕೇವಲ ಅಧಿಕಾರಿಗಳೊಂದಿಗೆ ಸಭೆ ನಡೆಸುವುದು ಶಿಷ್ಟಾಚಾರದ ಉಲ್ಲಂಘನೆಯಾಗಿದೆ ಎಂದು ಟೀಕಿಸಿದರು. ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ ಸರ್ಕಾರದಿಂದ ನೇಮಕಗೊಂಡ ಸದಸ್ಯರಿಗೂ ಸಮಾನ ಕಾಳಜಿ ಮತ್ತು ಜವಾಬ್ದಾರಿ ಇದ್ದು, ಅವರ ಅಭಿಪ್ರಾಯಗಳಿಗೂ ಮಹತ್ವ ನೀಡಬೇಕು ಎಂದು ಆಗ್ರಹಿಸಿದರು.
ಕೆಡಿಪಿ ಸಭೆಗಳನ್ನು ನಡೆಸದ ಪರಿಣಾಮಕ್ಕೆ ಕಾರ್ಕಳ ಸರ್ಕಾರಿ ಆಸ್ಪತ್ರೆಯ ವೈದ್ಯರ ನೇಮಕಾತಿಯೇ ದೊಡ್ಡ ಉದಾಹರಣೆಯಾಗಿದೆ ಎಂದು ಮೊಯಿದ್ದಿನಬ್ಬಾ ಹೇಳಿದರು. ಆಸ್ಪತ್ರೆಯಲ್ಲಿ ಮಹಿಳಾ ವೈದ್ಯಾಧಿಕಾರಿ ಹಾಗೂ ತಜ್ಞ ವೈದ್ಯರ ಕೊರತೆಯಿಂದ ಸಾರ್ವಜನಿಕರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ ಎಂಬ ದೂರುಗಳು ನಿರಂತರವಾಗಿ ಬರುತ್ತಿದ್ದರೂ ಸಮಸ್ಯೆ ಪರಿಹರಿಸಲು ಕ್ರಮ ಕೈಗೊಳ್ಳಲಾಗಿಲ್ಲ. ಒಂದು ವೇಳೆ ಕೆಡಿಪಿ ಸಭೆ ನಡೆದಿದ್ದರೆ ಈ ವಿಚಾರವನ್ನು ಚರ್ಚಿಸಿ ಸೂಕ್ತ ಪರಿಹಾರ ಕಂಡುಕೊಳ್ಳಬಹುದಿತ್ತು ಎಂದು ಅವರು ಅಭಿಪ್ರಾಯಪಟ್ಟರು. ಆದರೆ ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಅವರು ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿದ ಒಂದೇ ದಿನದಲ್ಲಿ ವೈದ್ಯರ ನೇಮಕಾತಿ ನಡೆದಿರುವುದು ಗಮನಾರ್ಹ ಬೆಳವಣಿಗೆಯಾಗಿದೆ. ಕಳೆದ 22 ವರ್ಷಗಳಿಂದ ಶಾಸಕರಾಗಿ ಹಾಗೂ ಸಚಿವರಾಗಿ ಅಧಿಕಾರ ನಡೆಸುತ್ತಿರುವ ವ್ಯಕ್ತಿಯಿಂದ ಸಾಧ್ಯವಾಗದ ಕೆಲಸ ಮಹಿಳಾ ಆಯೋಗದ ಅಧ್ಯಕ್ಷರ ಒಂದು ಭೇಟಿಯಿಂದ ಹೇಗೆ ಸಾಧ್ಯವಾಯಿತು ಎಂಬ ಪ್ರಶ್ನೆ ಉದ್ಭವಿಸಿದೆ ಎಂದು ಅವರು ವಾಗ್ದಾಳಿ ನಡೆಸಿದರು. ಕ್ಷೇತ್ರದ ಜನರ ಹಿತದೃಷ್ಟಿಯಿಂದ ತಕ್ಷಣ ಕೆಡಿಪಿ ಸಭೆ ಕರೆದು ಅಭಿವೃದ್ಧಿ ಯೋಜನೆಗಳ ಪ್ರಗತಿ, ಸಾರ್ವಜನಿಕ ಸಮಸ್ಯೆಗಳು ಹಾಗೂ ಇಲಾಖೆಗಳ ಕಾರ್ಯನಿರ್ವಹಣೆ ಕುರಿತು ಸಮಗ್ರ ಚರ್ಚೆ ನಡೆಸಬೇಕು ಎಂದು ಅವರು ಒತ್ತಾಯಿಸಿದರು. ಪತ್ರಿಕಾಗೋಷ್ಠಿಯಲ್ಲಿ ಕೆಡಿಪಿ ಸದಸ್ಯರಾದ ರುಕ್ಮಯ ಶೆಟ್ಟಿಗಾರ್ ಕುಕ್ಕುಂದೂರು ಹಾಗೂ ಅಮಿತಾ ಶೆಟ್ಟಿ ಸಾಣೂರು ಉಪಸ್ಥಿತರಿದ್ದರು.




