
ಚಾಮರಾಜನಗರ : ಪ್ರಬಂಧ ಸಾಹಿತ್ಯ ಕ್ಷೇತ್ರದಲ್ಲಿ ಅಗ್ರಗಣ್ಯ ಕೊಡುಗೆ ನೀಡಿದ ಮೂರ್ತಿರಾಯರು ಲಲಿತ ಪ್ರಬಂಧ ಸೊಗಡನ್ನು ಜಗತ್ತಿಗೆ ಪರಿಚಯಿಸಿದ ಶ್ರೇಷ್ಠ ಸಾಹಿತಿಗಳು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಸಂಸ್ಕೃತಿ ಚಿಂತಕರಾದ ಸುರೇಶ್ ಎನ್ ಋಗ್ವೇದಿ ತಿಳಿಸಿದರು ಅವರು ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ ಸಭಾಂಗಣದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಮ್ಮಿಕೊಂಡಿದ್ದ ಶತಾಯುಷಿ ಎ ಎನ್ ಮೂರ್ತಿರಾಯರ ಸಾಹಿತ್ಯ ಕೊಡುಗೆಗಳ ಕುರಿತು ಮಾತನಾಡುತ್ತಾ ಲೇಖಕರಾಗಿ, ವಿಮರ್ಶಕರಾಗಿ,ಚಿಂತಕರಾಗಿ, ಅನುವಾದ,ವಿಡಂಬನೆ, ಶಿಶು ಸಾಹಿತ್ಯ ಪ್ರಬಂಧ,ಕಥೆ,ಕಾದಂಬರಿ ಪ್ರವಾಸಿ ಕಥನ, ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಬಹುಮುಖ ಪ್ರತಿಭೆ ಮೂರ್ತಿರಾಯರು. ಮಂಡ್ಯ ಜಿಲ್ಲೆಯ ಅಕ್ಕಿಹೆಬ್ಬಾಳಿನಲ್ಲಿ ಜನಿಸಿದ ಇವರು ತಮ್ಮ ವೈಚಾರಿಕತೆ, ಪ್ರಗತಿಪರ ಚಿಂತನೆಗೆ ಹೆಸರು ಮಾಡಿದವರು.ಅವರ ಸಾಹಿತ್ಯದಲ್ಲಿ ಮಾನವೀಯತೆ, ಮತ್ತು ಮೂಢನಂಬಿಕೆ ವಿರೋಧದ ತೀಕ್ಷ್ಣ ಬರಹವನ್ನು ಕಾಣಬಹುದು. ಸಾಹಿತ್ಯದ ಸ್ವತಂತ್ರ ಚಿಂತನೆ ಮಾಡಿ ಶತಾಯುಷಿಗಳಾಗಿ ಬದುಕಿ ಕನ್ನಡ ಸಾಹಿತ್ಯವನ್ನು ವಿಶಾಲಗೊಳಿಸಿದ ಮೂರ್ತಿರಾಯರ ದೇವರು, ಚಿತ್ರಗಳು ಮತ್ತು ಪತ್ರಗಳು, ಪ್ರಸಿದ್ಧ ಕೃತಿಗಳಾಗಿವೆ. ನಮ್ಮ ಮನೆಯಲ್ಲಿ ಇತಿಹಾಸ ಪ್ರಬಂದ ಸಂಕಲನಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಕೂಡ ದೊರೆಕಿತು. ಸಂಜೆಗತ್ತಲು, ಭಾಗ್ಯದೇವತೆ,ಆಷಾಡಭೂತಿ, ಅಪೂರ್ವ ಪಶ್ಚಿಮ, ಹಗಲುಗನಸು ಮುಂತಾದ ಕೊಡುಗೆಗಳನ್ನು ನೀಡಿದ ಮೂರ್ತಿರಾಯರು ಸಾಹಿತ್ಯ ಕ್ಷೇತ್ರದಲ್ಲಿ ನೆಲೆ ಕಂಡುಕೊಂಡ ಶ್ರೇಷ್ಠ ಕವಿಗಳು. ಅವರ ನಾಟಕಗಳಲ್ಲಿ ವಿಶೇಷವಾದ ಪಾತ್ರ ಸೃಷ್ಟಿಗಳು,ಹಾಸ್ಯ,ಕುತೂಹಲದ ಅಂಶಗಳನ್ನು ವಿಶೇಷವಾಗಿ ಗಮನಿಸಬಹುದು. 56ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದ ಮೂರ್ತಿರಾಯರು ಕನ್ನಡ ಸಾಹಿತ್ಯ ಪ್ರಪಂಚದಲ್ಲಿ ಮರೆಯಲಾಗದ ಅಪೂರ್ವ ರತ್ನವೆಂದು ಋಗ್ವೇದಿ ತಿಳಿಸಿದರು.
ಬರಹಗಾರ ಲಕ್ಷ್ಮಿ ನರಸಿಂಹ ಮಾತನಾಡಿ ಮೂರ್ತಿರಾಯರು ಮಿತ ಭಾಷೆಗಳು. ಸರಳ ಜೀವನದ ಮೂಲಕ ಉತ್ಕೃಷ್ಟ ಸಾಹಿತ್ಯವನ್ನು ಬರೆದವರು. ಅವರ ದೇವರು ಕೃತಿ ಹಲವು ರೀತಿಯಲ್ಲಿ ಚಿಂತನೆಗೆ ಅವಕಾಶ ಮಾಡಿದ ಸಾಹಿತ್ಯವಾಗಿದೆ.ಪ್ರಗತಿ ಚಿಂತನೆ ವೈಚಾರಿಕತೆ ಮನೋಭಾವ ಹಾಗೂ ಧಾರ್ಮಿಕತೆಯ ಆಳವಾದ ಸ್ಥಿತಿಗತಿಯನ್ನು ಅದು ತಿಳಿಸುತ್ತದೆ. ಅಧ್ಯಾಪಕರಾಗಿ ಸೇವೆ ಸಲ್ಲಿಸಿದ ಮೂರ್ತಿ ರಾಯರು ಸಾವಿರಾರು ವಿದ್ಯಾರ್ಥಿಗಳಿಗೆ ಉತ್ತಮ ಮಾರ್ಗದರ್ಶಕರು, ಚಿಂತನಾಶೀಲರು,ಜ್ಞಾನಿಗಳು ಆಗಿದ್ದವರು ಎಂದು ತಿಳಿಸಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ನಿರ್ದೇಶಕರಾದ ರವಿಚಂದ್ರ ಪ್ರಸಾದ್ ಕಹಳೆರವರು ಎ ಎನ್ ಮೂರ್ತಿರಾಯರ ಜೀವನ ಮತ್ತು ಸಾಧನೆಯ ಪರಿಚಯವನ್ನು ಪ್ರಾಸ್ತಾವಿಕವಾಗಿ ನೆರವೇರಿಸಿ ಮೈಸೂರು ವಿಶ್ವವಿದ್ಯಾಲಯದ ಇಂಗ್ಲಿಷ್ ಪ್ರಾಧ್ಯಾಪಕರಾಗಿ, ಕನ್ನಡ ಸಂಸ್ಕೃತಿ ಇಲಾಖೆಯ ಮೊದಲ ನಿರ್ದೇಶಕರಾಗಿ ಸೇವೆಯನ್ನು ಸಲ್ಲಿಸಿದ ಮೂರ್ತಿ ರಾಯರು ಪ್ರಗತಿಪರ ಚಿಂತನೆಗೆ ಹೆಸರು ಮಾಡಿದವರು. ಜೂನ್ 16ರಂದು ಜನಿಸಿದ ಅಕ್ಕಿಹೆಬ್ಬಾಳ ನರಸಿಂಹ ಮೂರ್ತಿ ರಾವ್ ರವರನ್ನು ಕನ್ನಡ ಸಾಹಿತ್ಯ ಪರಿಷತ್ತು ಸ್ಮರಿಸಿ ಸಿಕೊಳ್ಳುತ್ತಿರುವುದು ಗೌರವ ತಂದಿದೆ ಎಂದರು.
ಕನ್ನಡ ಸಾಹಿತ್ಯ ಪರಿಷತ್ತಿನ ನಿರ್ದೇಶಕರಾದ ಸರಸ್ವತಿ, ಬಿಕೆ ಆರಾಧ್ಯ, ಸಂಜು, ಕೀರ್ತಿ, ಕುಮಾರ, ಅಭಿಜಿತ್, ನಾಗಶೆಟ್ಟಿ, ಹನುಮಂತ ನಾಯಕ ಮುಂತಾದವರು ಇದ್ದರು.




