ಚಿಕ್ಕಮಗಳೂರು: ಜಿಲ್ಲೆಯ ಕೊಪ್ಪ ತಾಲೂಕಿನ ಕುಂಚೂರು ಗ್ರಾಮದಲ್ಲಿ ಮೆಸ್ಕಾಂ ಇಲಾಖೆಯ ಜೂನಿಯರ್ ಇಂಜಿನಿಯರ್ (ಜೆ.ಇ.) ಅವರ ಪುತ್ರಿ ಜಲನ್ಯ ಸಿನಿಮೀಯ ರೀತಿಯಲ್ಲಿ ಮನೆಯಿಂದ ನಾಪತ್ತೆಯಾಗಿರುವ ಘಟನೆ ಬೆಳಕಿಗೆ ಬಂದಿದೆ. ಈ ವರ್ಷ ದ್ವಿತೀಯ ಪಿಯುಸಿ ಪೂರ್ಣಗೊಳಿಸಿ ಮನೆಯಲ್ಲೇ ಇದ್ದ ಜಲನ್ಯ, ತಂದೆಗೆ ಅನುಮಾನ ಬಾರದಂತೆ ಬೆಡ್ ಮೇಲೆ ಮನುಷ್ಯ ಮಲಗಿರುವಂತೆ ಗೊಂಬೆಯನ್ನು ಇಟ್ಟು ಅದರ ಮೇಲೆ ರಗ್ ಹೊದಿಸಿ ಮನೆಯಿಂದ ಹೊರಟಿದ್ದಾಳೆ ಎನ್ನಲಾಗಿದೆ. ಶೃಂಗೇರಿಯ ಬಿಜಿಎಸ್ ವಸತಿ ನಿಲಯದಲ್ಲಿ ವ್ಯಾಸಂಗ ಮಾಡುತ್ತಿದ್ದ ಜಲನ್ಯ ದ್ವಿತೀಯ ಪಿಯುಸಿ ಶಿಕ್ಷಣ ಪೂರ್ಣಗೊಳಿಸಿದ್ದಳು. ಕಳೆದ ಎರಡು ತಿಂಗಳಿಂದ ಪ್ರತಿದಿನ ಕೊಪ್ಪ ಪಟ್ಟಣಕ್ಕೆ ಕಂಪ್ಯೂಟರ್ ತರಗತಿಗೆ ತೆರಳುತ್ತಿದ್ದ ಯುವತಿ, ಘಟನೆಯ ಮುನ್ನ ದಿನ ತಂದೆಯೊಂದಿಗೆ ಶೃಂಗೇರಿ ದೇವಸ್ಥಾನಕ್ಕೆ ಭೇಟಿ ನೀಡಿ ಬಂದಿದ್ದಳು. ಆದರೆ ಮರುದಿನ ಬೆಳಗ್ಗೆ ಮಗಳು ಮಲಗಿದ್ದಾಳೆ ಎಂದು ಭಾವಿಸಿದ್ದ ತಂದೆಗೆ ಬಳಿಕ ಆಘಾತ ಕಾದಿದ್ದು, ಬೆಡ್ ಮೇಲೆ ಗೊಂಬೆ ಇಟ್ಟಿರುವುದು ಮತ್ತು ಜಲನ್ಯ ಕಾಣೆಯಾಗಿರುವುದು ಗೊತ್ತಾಗಿದೆ. ತಂದೆಗೆ ತಿಳಿಯದಂತೆ ಮೊಬೈಲ್ ಫೋನ್ ಇಟ್ಟುಕೊಂಡಿದ್ದಳು ಎಂಬ ಮಾಹಿತಿಯೂ ಹೊರಬಂದಿದೆ. ಪುತ್ರಿಯನ್ನು ಹುಡುಕಿಕೊಡುವಂತೆ ಹರಿಹರಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಯುವತಿಯ ಪತ್ತೆಗೆ ಕಾರ್ಯಾಚರಣೆ ಆರಂಭಿಸಿದ್ದಾರೆ.
