
ಉಡುಪಿ: ರಾಜ್ಯದಲ್ಲಿ ಸೈಬರ್ ವಂಚನೆ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಇದೀಗ ಡೆಬಿಟ್ ಕಾರ್ಡ್ ಬಳಕೆಯ ಬಳಿಕ ವ್ಯಕ್ತಿಯೊಬ್ಬರು 2.12 ಲಕ್ಷ ರೂಪಾಯಿ ಕಳೆದುಕೊಂಡಿರುವ ಘಟನೆ ಉಡುಪಿಯಲ್ಲಿ ವರದಿಯಾಗಿದೆ. ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ದೂರುದಾರರು ತಮ್ಮ ಡೆಬಿಟ್ ಕಾರ್ಡ್ ಬಳಸಿ ಆಸ್ಪತ್ರೆಯ ಬಿಲ್ ಪಾವತಿಸಿದ್ದರು. ಬಳಿಕ ಯಾವುದೇ ಹಣಕಾಸು ವ್ಯವಹಾರ ನಡೆಸದಿದ್ದರೂ ಬ್ಯಾಂಕ್ ಖಾತೆಯಿಂದ ಹಣ ಡೆಬಿಟ್ ಆಗಿರುವ ಕುರಿತು ಮೊಬೈಲ್ಗೆ ಎಸ್ಎಂಎಸ್ ಸಂದೇಶ ಬಂದಿದ್ದು, ಅನುಮಾನಗೊಂಡ ಅವರು ಬ್ಯಾಂಕ್ಗೆ ತೆರಳಿ ಖಾತೆಯ ವ್ಯವಹಾರಗಳ ವಿವರ ಪರಿಶೀಲಿಸಿದ್ದಾರೆ. ಈ ವೇಳೆ ಅವರಿಗೆ ಅರಿವಿಲ್ಲದೆ 2.12 ಲಕ್ಷ ರೂಪಾಯಿ ಹಣವನ್ನು ಅಪರಿಚಿತ ಖಾತೆಗೆ ವರ್ಗಾವಣೆ ಮಾಡಿರುವುದು ಬೆಳಕಿಗೆ ಬಂದಿದೆ. ವಂಚನೆಗೆ ಒಳಗಾದ ವ್ಯಕ್ತಿ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 66(D) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ. ರಾಜ್ಯದಲ್ಲಿ ಸೈಬರ್ ವಂಚಕರು ಹೊಸ ಹೊಸ ತಂತ್ರಗಳನ್ನು ಬಳಸಿ ಸಾರ್ವಜನಿಕರನ್ನು ಗುರಿಯಾಗಿಸುತ್ತಿರುವ ಹಿನ್ನೆಲೆ, ಡೆಬಿಟ್ ಹಾಗೂ ಕ್ರೆಡಿಟ್ ಕಾರ್ಡ್ ಬಳಕೆಯ ವೇಳೆ ಎಚ್ಚರಿಕೆ ವಹಿಸುವಂತೆ ಪೊಲೀಸರು ಸಲಹೆ ನೀಡಿದ್ದಾರೆ.




