
ಬೆಂಗಳೂರು: ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಮೊದಲ ಬಾರಿಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ವ್ಯಾಪ್ತಿಯ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಸಚಿವ ಕೃಷ್ಣ ಭೈರೇಗೌಡ, ನಗರದ ಮೂಲಸೌಕರ್ಯ ಸಮಸ್ಯೆಗಳ ಕುರಿತು ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ನಗರದ ರಸ್ತೆಗಳಲ್ಲಿ ಪದೇಪದೇ ಗುಂಡಿಗಳು ಉಂಟಾಗುತ್ತಿರುವ ಬಗ್ಗೆ ಪ್ರಶ್ನಿಸಿದ ಸಚಿವರು, “ರಸ್ತೆ ನಿರ್ಮಾಣ ಮಾಡುವುದು ರಾಕೆಟ್ ಸೈನ್ಸಾ? ವರ್ಷಪೂರ್ತಿ ಗುಂಡಿ ಮುಚ್ಚುವ ಕೆಲಸವೇ ನಡೆಯಬೇಕಾ? ಗುಂಡಿ ಇಲ್ಲದ ರಸ್ತೆ ನಿರ್ಮಾಣ ಮಾಡಲು ಸಾಧ್ಯವಿಲ್ಲವೇ?” ಎಂದು ಅಧಿಕಾರಿಗಳನ್ನು ಖಡಕ್ವಾಗಿ ಪ್ರಶ್ನಿಸಿದರು. ಸಭೆಯಲ್ಲಿ ನಗರದ ರಸ್ತೆ ಅಭಿವೃದ್ಧಿ, ವೈಟ್ ಟಾಪಿಂಗ್ ಕಾಮಗಾರಿಗಳು, ಕೆರೆಗಳ ಅಭಿವೃದ್ಧಿ, ಕಂದಾಯ ವಸೂಲಿ, ಬಾಕಿ ಕಂದಾಯ ಸಂಗ್ರಹ ಹಾಗೂ ಇ-ಖಾತೆ ಅರ್ಜಿಗಳ ಪ್ರಗತಿ ಕುರಿತು ಮಾಹಿತಿ ಪಡೆದುಕೊಂಡರು. ಇದೇ ವೇಳೆ ಮಳೆಗಾಲದಲ್ಲಿ ರಾಜಕಾಲುವೆಗಳ ನೀರು ರಸ್ತೆಗೆ ಹರಿದು ಸಾರ್ವಜನಿಕರಿಗೆ ತೊಂದರೆ ಉಂಟಾಗುತ್ತಿರುವ ವಿಚಾರ ಪ್ರಸ್ತಾಪಿಸಿ, ರಾಜಕಾಲುವೆ ಹೂಳು ತೆರವು ಮತ್ತು ನಿರ್ವಹಣೆಯಲ್ಲಿ ನಿರ್ಲಕ್ಷ್ಯ ವಹಿಸಿದ ಇಂಜಿನಿಯರ್ಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು. ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, “ನನ್ನ ಕನಸಿನ ಬೆಂಗಳೂರು ಸರಳವಾಗಿದೆ. ಇಲ್ಲಿ ವಾಸಿಸುವ ಜನರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಡುವುದೇ ನನ್ನ ಆದ್ಯತೆ. ಟ್ರಾಫಿಕ್ ಹಾಗೂ ಮೂಲಸೌಕರ್ಯ ಸಮಸ್ಯೆಗಳು ಇತರ ಮಹಾನಗರಗಳಲ್ಲಿಯೂ ಇವೆ. ಆದರೆ ಬೆಂಗಳೂರಿನ ಸಮಸ್ಯೆಗಳು ಹೆಚ್ಚು ಸುದ್ದಿಯಾಗುತ್ತವೆ. ಆದರೂ ಹಂತ ಹಂತವಾಗಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುತ್ತೇವೆ” ಎಂದು ಹೇಳಿದರು. ನಗರಾಭಿವೃದ್ಧಿ ಖಾತೆ ಕುರಿತ ಹಿಂದಿನ ಗೊಂದಲದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಸಮರ್ಪಕ ಆಡಳಿತಕ್ಕಾಗಿ ಪೂರ್ಣ ಪ್ರಮಾಣದ ಖಾತೆ ಅಗತ್ಯ ಎಂಬ ತಮ್ಮ ಅಭಿಪ್ರಾಯವನ್ನು ಮುಖ್ಯಮಂತ್ರಿ ಹಾಗೂ ಪಕ್ಷದ ವರಿಷ್ಠರಿಗೆ ತಿಳಿಸಿದ್ದಾಗಿ ಹೇಳಿ, ಅವರ ಸೂಚನೆಯಂತೆ ಇದೀಗ ಇಲಾಖೆಯ ಜವಾಬ್ದಾರಿ ಸ್ವೀಕರಿಸಿರುವುದಾಗಿ ಸ್ಪಷ್ಟಪಡಿಸಿದರು.




