
ನವದೆಹಲಿ: ನೀಟ್ (UG) 2026 ಮರುಪರೀಕ್ಷೆಯ ಪಾವಿತ್ರ್ಯತೆ ಕಾಪಾಡುವ ಹಾಗೂ ಪ್ರಶ್ನೆ ಪತ್ರಿಕೆ ಸೋರಿಕೆ, ಸೈಬರ್ ವಂಚನೆ ಮತ್ತು ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ಕೇಂದ್ರ ಸರ್ಕಾರ ದೇಶಾದ್ಯಂತ ಜನಪ್ರಿಯ ಮೆಸೇಜಿಂಗ್ ಆ್ಯಪ್ ಟೆಲಿಗ್ರಾಮ್ಗೆ ತಾತ್ಕಾಲಿಕ ನಿರ್ಬಂಧ ವಿಧಿಸಿದೆ ಎನ್ನಲಾಗಿದೆ. ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಶಿಫಾರಸಿನ ಮೇರೆಗೆ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ (MeitY) ಮಾಹಿತಿ ತಂತ್ರಜ್ಞಾನ ಕಾಯ್ದೆ 2000ರ ಸೆಕ್ಷನ್ 69A ಅಡಿಯಲ್ಲಿ ಈ ಕ್ರಮ ಕೈಗೊಂಡಿದ್ದು, ಜೂನ್ 21ರಂದು ನಡೆಯಲಿರುವ ನೀಟ್ ಮರುಪರೀಕ್ಷೆಯನ್ನು ಸುರಕ್ಷಿತ ಹಾಗೂ ನ್ಯಾಯಸಮ್ಮತ ವಾತಾವರಣದಲ್ಲಿ ನಡೆಸುವುದು ಇದರ ಉದ್ದೇಶವಾಗಿದೆ. ವರದಿಗಳ ಪ್ರಕಾರ, ಜೂನ್ 22ರವರೆಗೆ ಭಾರತದಲ್ಲಿ ಟೆಲಿಗ್ರಾಮ್ ಬಳಕೆಯನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದ್ದು, ಜೂನ್ 30ರವರೆಗೆ ಹಳೆಯ ಸಂದೇಶಗಳನ್ನು ಎಡಿಟ್ ಮಾಡುವ ಸೌಲಭ್ಯವನ್ನೂ ಸ್ಥಗಿತಗೊಳಿಸಲು ಸೂಚಿಸಲಾಗಿದೆ. ಪರೀಕ್ಷೆ ಬಳಿಕ ಹಳೆಯ ಸಂದೇಶಗಳನ್ನು ತಿದ್ದುಪಡಿ ಮಾಡಿ ಪ್ರಶ್ನೆ ಪತ್ರಿಕೆಗಳನ್ನು ಸೇರಿಸಿ ಸೋರಿಕೆಯಾಗಿದೆ ಎಂಬ ಸುಳ್ಳು ಪ್ರಚಾರ ನಡೆಸುತ್ತಿರುವುದು ತನಿಖೆಯಲ್ಲಿ ಬೆಳಕಿಗೆ ಬಂದ ಹಿನ್ನೆಲೆ ಈ ಕ್ರಮ ಕೈಗೊಳ್ಳಲಾಗಿದೆ. “ಪೇಪರ್ ಲೀಕ್ ನೀಟ್”, “ಪ್ರೈವೇಟ್ ಮಾಫಿಯಾ” ಸೇರಿದಂತೆ ಹಲವು ಟೆಲಿಗ್ರಾಮ್ ಚಾನಲ್ಗಳು ಅಭ್ಯರ್ಥಿಗಳಿಂದ ಲಕ್ಷಾಂತರ ರೂಪಾಯಿ ವಂಚಿಸುತ್ತಿರುವುದು ಪತ್ತೆಯಾಗಿದ್ದು, ಬಿಹಾರ, ಗುಜರಾತ್, ರಾಜಸ್ಥಾನ ಪೊಲೀಸ್ ಹಾಗೂ ಗೃಹ ಸಚಿವಾಲಯದ I4C ಜಂಟಿ ಕಾರ್ಯಾಚರಣೆಯಲ್ಲಿ ನೂರಾರು ನಕಲಿ ಚಾನಲ್ಗಳು ಮತ್ತು ಬಾಟ್ಗಳನ್ನು ಬಂದ್ ಮಾಡಲಾಗಿದೆ. ಅಹಮದಾಬಾದ್ನಲ್ಲಿ ಸುಮಾರು ₹1.5 ಕೋಟಿ ವಂಚನೆ ನಡೆಸಿದ್ದ ಅಂತರರಾಜ್ಯ ಸೈಬರ್ ಗ್ಯಾಂಗ್ವನ್ನೂ ಬಂಧಿಸಲಾಗಿದೆ ಎಂದು ವರದಿಗಳು ತಿಳಿಸಿವೆ. ಈ ತಾತ್ಕಾಲಿಕ ನಿರ್ಬಂಧದಿಂದ ಸಾರ್ವಜನಿಕರಿಗೆ ಆಗುವ ಅನಾನುಕೂಲತೆಗೆ ವಿಷಾದ ವ್ಯಕ್ತಪಡಿಸಿರುವ NTA, ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯ ಹಾಗೂ ಪರೀಕ್ಷೆಯ ವಿಶ್ವಾಸಾರ್ಹತೆಯನ್ನು ಕಾಪಾಡಲು ಈ ಕ್ರಮ ಅನಿವಾರ್ಯವಾಗಿದೆ ಎಂದು ಸ್ಪಷ್ಟಪಡಿಸಿದ್ದು, ಅಭ್ಯರ್ಥಿಗಳು ಯಾವುದೇ ವದಂತಿಗಳಿಗೆ ಕಿವಿಗೊಡದೆ ಅಧಿಕೃತ ಮಾಹಿತಿಯನ್ನು ಮಾತ್ರ ನಂಬುವಂತೆ ಹಾಗೂ ಅನುಮಾನಾಸ್ಪದ ಚಟುವಟಿಕೆಗಳ ಬಗ್ಗೆ ರಾಷ್ಟ್ರೀಯ ಸೈಬರ್ ಕ್ರೈಂ ಸಹಾಯವಾಣಿ 1930ಕ್ಕೆ ದೂರು ನೀಡುವಂತೆ ಮನವಿ ಮಾಡಿದೆ.



