
ಬೆಂಗಳೂರು: ನಗರದಲ್ಲಿ ಜೂನ್ 18ರಂದು ಬೇಕರಿ ಮತ್ತು ಕಾಂಡಿಮೆಂಟ್ಸ್ಗಳು ಸಂಪೂರ್ಣ ಬಂದ್ ಆಗಲಿದ್ದು, ಕಾರ್ಮಿಕ ಪರಿಷತ್ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿದೆ. ಹಫ್ತಾ ವಸೂಲಿ, ಪುಡಿ ರೌಡಿಗಳ ದಬ್ಬಾಳಿಕೆ ಹಾಗೂ ಪಾಲಿಕೆ ಆರೋಗ್ಯ ಇಲಾಖೆ ಅಧಿಕಾರಿಗಳ ಕಿರುಕುಳ ಹೆಚ್ಚಾಗಿರುವುದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಂಘಟನೆ ತಿಳಿಸಿದೆ. ಗುರುವಾರ ಬೆಳಿಗ್ಗೆ 5 ಗಂಟೆಯಿಂದಲೇ ಪ್ರತಿಭಟನೆ ಆರಂಭವಾಗಲಿದ್ದು, ನಗರದ ಹಲವೆಡೆ ಹಾಲು, ಟೀ, ಕಾಫಿ, ಕೇಕ್, ಬಿಸ್ಕೆಟ್ ಸೇರಿದಂತೆ ಬೇಕರಿ ಉತ್ಪನ್ನಗಳ ಲಭ್ಯತೆಯಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆ ಇದೆ. ನಗರದಲ್ಲಿ ಪುಡಿ ರೌಡಿಗಳ ಅಟ್ಟಹಾಸ ಹೆಚ್ಚಾಗಿದ್ದು, ವ್ಯಾಪಾರಿಗಳ ಮೇಲೆ ನಿರಂತರ ಒತ್ತಡ ಮತ್ತು ಬೆದರಿಕೆಗಳು ನಡೆಯುತ್ತಿವೆ ಎಂದು ಮಾಲೀಕರು ಆರೋಪಿಸಿದ್ದಾರೆ. ಜೊತೆಗೆ, ತಂಬಾಕು ಉತ್ಪನ್ನಗಳ ಮಾರಾಟಕ್ಕೆ ಅವಕಾಶ ನೀಡಬೇಕು ಅಥವಾ ಸಂಪೂರ್ಣ ನಿಷೇಧಿಸಬೇಕು, ಅಧಿಕಾರಿಗಳಿಂದ ನಡೆಯುತ್ತಿರುವ ಸೀಜ್ ಕ್ರಮಗಳಿಂದ ಉಂಟಾಗುತ್ತಿರುವ ನಷ್ಟವನ್ನು ತಪ್ಪಿಸಬೇಕು, ವ್ಯಾಪಾರಿಗಳ ಮೇಲಿನ ದಬ್ಬಾಳಿಕೆಗೆ ಕಡಿವಾಣ ಹಾಕಬೇಕು ಹಾಗೂ ಪುಡಿ ರೌಡಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ವ್ಯಾಪಾರಿಗಳ ಸಮಸ್ಯೆಗಳಿಗೆ ಸರ್ಕಾರ ಮತ್ತು ಸಂಬಂಧಿತ ಇಲಾಖೆಗಳು ಸೂಕ್ತ ಪರಿಹಾರ ನೀಡದಿದ್ದಲ್ಲಿ ಮುಷ್ಕರವನ್ನು ಮುಂದುವರಿಸುವ ಎಚ್ಚರಿಕೆಯನ್ನು ಕೂಡ ಕಾರ್ಮಿಕ ಪರಿಷತ್ ನೀಡಿದೆ.




