
ಬೆಂಗಳೂರು: ಕರ್ನಾಟಕದ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರಿಗೆ ಸುದೀರ್ಘ ಪತ್ರ ಬರೆದು, ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್ಎಸ್ಎಸ್) 100 ವರ್ಷಗಳನ್ನು ಪೂರೈಸಿರುವ ಹಿನ್ನೆಲೆಯಲ್ಲಿ ಅಭಿನಂದನೆ ಸಲ್ಲಿಸುವುದರ ಜೊತೆಗೆ ಸಂಘದ ಕಾನೂನಾತ್ಮಕ ಸ್ಥಾನಮಾನ, ಸಂಘಟನಾ ರಚನೆ, ಆರ್ಥಿಕ ವ್ಯವಹಾರಗಳು ಹಾಗೂ ಸಾರ್ವಜನಿಕ ಜವಾಬ್ದಾರಿಗಳ ಕುರಿತು ಹಲವು ಪ್ರಶ್ನೆಗಳನ್ನು ಎತ್ತಿದ್ದಾರೆ. ಭಾರತ ಹಾಗೂ ವಿದೇಶಗಳಲ್ಲಿ 60 ಸಾವಿರಕ್ಕೂ ಹೆಚ್ಚು ಶಾಖೆಗಳು ಮತ್ತು ಕೋಟ್ಯಂತರ ಸ್ವಯಂಸೇವಕರನ್ನು ಹೊಂದಿದೆ ಎಂದು ಹೇಳಿಕೊಳ್ಳುವ ಆರ್ಎಸ್ಎಸ್ ಸಾರ್ವಜನಿಕ ಜೀವನದಲ್ಲಿ ಮಹತ್ವದ ಪ್ರಭಾವ ಹೊಂದಿರುವುದರಿಂದ ಪಾರದರ್ಶಕತೆ, ಹೊಣೆಗಾರಿಕೆ ಮತ್ತು ಸಂವಿಧಾನಾತ್ಮಕ ಮೌಲ್ಯಗಳಿಗೆ ಬದ್ಧವಾಗಿರಬೇಕೆಂದು ಅವರು ಅಭಿಪ್ರಾಯಪಟ್ಟಿದ್ದಾರೆ. ರಾಷ್ಟ್ರೀಯತೆ, ಶಿಸ್ತು ಹಾಗೂ ಕರ್ತವ್ಯದ ಬಗ್ಗೆ ನಿರಂತರವಾಗಿ ಮಾತನಾಡುವ ಆರ್ಎಸ್ಎಸ್ ಕಾನೂನು ಪಾಲನೆ ಮತ್ತು ಸಂವಿಧಾನದ ಬಗೆಗಿನ ಗೌರವದಲ್ಲಿಯೂ ಮಾದರಿಯಾಗಬೇಕು ಎಂದು ಹೇಳಿರುವ ಅವರು, ಕಾರ್ಮಿಕ ಸಂಘಟನೆಗಳು, ಎನ್ಜಿಒಗಳು, ಟ್ರಸ್ಟ್ಗಳು, ಧಾರ್ಮಿಕ ಸಂಸ್ಥೆಗಳು ಹಾಗೂ ಕಂಪನಿಗಳು ನೋಂದಣಿ, ಲೆಕ್ಕಪರಿಶೋಧನೆ ಮತ್ತು ತೆರಿಗೆ ಪಾವತಿಗೆ ಒಳಪಡುವಂತೆ ಆರ್ಎಸ್ಎಸ್ ಕೂಡ ಅದೇ ನಿಯಮಗಳಿಗೆ ಬದ್ಧವಾಗಿರಬೇಕು ಎಂದು ಒತ್ತಾಯಿಸಿದ್ದಾರೆ. ಶತಮಾನೋತ್ಸವದ ಈ ಸಂದರ್ಭದಲ್ಲಿ ಆರ್ಎಸ್ಎಸ್ ತನ್ನನ್ನು ಅಧಿಕೃತವಾಗಿ ನೋಂದಾಯಿಸಿಕೊಳ್ಳುವುದು, ಚಟುವಟಿಕೆಗಳು ಹಾಗೂ ಆರ್ಥಿಕ ವ್ಯವಹಾರಗಳನ್ನು ಬಹಿರಂಗಪಡಿಸುವುದು ಮತ್ತು ಅನ್ವಯವಾಗುವ ಎಲ್ಲಾ ತೆರಿಗೆಗಳನ್ನು ಪಾವತಿಸುವುದು ದೇಶಕ್ಕೆ ನೀಡಬಹುದಾದ ಅತ್ಯುತ್ತಮ ಗೌರವ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಇದೇ ವೇಳೆ ಸಂಘದ ಕಾನೂನಾತ್ಮಕ ಸ್ಥಾನಮಾನ ಮತ್ತು ಸಂಘಟನಾ ರಚನೆ, ಪದಾಧಿಕಾರಿಗಳ ವಿವರಗಳು, ದೇಣಿಗೆ ಹಾಗೂ ಆದಾಯದ ಮೂಲಗಳು, ವೆಚ್ಚ ಮತ್ತು ಆಸ್ತಿಪಾಸ್ತಿಗಳ ಮಾಹಿತಿ, ತೆರಿಗೆ ಪಾವತಿ ಸ್ಥಿತಿ, ಅಧಿಕೃತ ನೋಂದಣಿಯಿಲ್ಲದೆ ಕಾರ್ಯನಿರ್ವಹಿಸಲು ಇರುವ ಕಾನೂನಾತ್ಮಕ ಆಧಾರ, ಸಾರ್ವಜನಿಕ ಜವಾಬ್ದಾರಿಯ ಚೌಕಟ್ಟು ಹಾಗೂ ಸಾರ್ವಜನಿಕ ಕಾರ್ಯಕ್ರಮಗಳು, ಮಾರ್ಗ ಮೆರವಣಿಗೆಗಳು ಮತ್ತು ಸಾಮೂಹಿಕ ಸಭೆಗಳಿಗೆ ಪಡೆಯುವ ಅನುಮತಿಗಳು ಸೇರಿದಂತೆ ಎಂಟು ಪ್ರಮುಖ ಅಂಶಗಳ ಕುರಿತು ಸ್ಪಷ್ಟನೆ ನೀಡುವಂತೆ ಮನವಿ ಮಾಡಿದ್ದಾರೆ. ಭಾರತೀಯ ಕಾನೂನಿನ ಚೌಕಟ್ಟಿನೊಳಗೆ ಪಾರದರ್ಶಕ ಹಾಗೂ ಜವಾಬ್ದಾರಿಯುತ ಸಂಘಟನೆಯಾಗಿ ಕಾರ್ಯನಿರ್ವಹಿಸುವ ಬಗ್ಗೆ ಅಧಿಕೃತ ಚರ್ಚೆಗೆ ಸರ್ಕಾರ ಸಿದ್ಧವಿದ್ದು, ಈ ಸಂಬಂಧ ಆರ್ಎಸ್ಎಸ್ ತನ್ನ ಅಧಿಕೃತ ಪ್ರತಿನಿಧಿಗಳನ್ನು ಕಳುಹಿಸುವ ಬಗ್ಗೆ ಪ್ರತಿಕ್ರಿಯೆ ನೀಡುವಂತೆ ಪ್ರಿಯಾಂಕ್ ಖರ್ಗೆ ತಮ್ಮ ಪತ್ರದಲ್ಲಿ ಕೋರಿದ್ದಾರೆ.




