
ಚಿಕ್ಕಮಗಳೂರು: ಬಿಎಸ್ಎನ್ಎಲ್ ಕಸ್ಟಮರ್ ಕೇರ್ ಪ್ರತಿನಿಧಿಯಂತೆ ನಟಿಸಿ ವ್ಯಕ್ತಿಯೊಬ್ಬರ ಬ್ಯಾಂಕ್ ಖಾತೆಯಿಂದ ₹75 ಸಾವಿರ ಹಣ ವರ್ಗಾವಣೆ ಮಾಡಿಕೊಂಡು ವಂಚಿಸಿರುವ ಘಟನೆ ಕೊಪ್ಪದಲ್ಲಿ ನಡೆದಿದೆ. ಹರಂದೂರು ಗ್ರಾಮದ ರವೀಂದ್ರ ಮೋತಿ ಎಂಬುವವರು ಕೆನರಾ ಬ್ಯಾಂಕ್ ಕೊಪ್ಪ ಶಾಖೆಯಲ್ಲಿ ಉಳಿತಾಯ ಖಾತೆ ಹೊಂದಿದ್ದು, ಸೆಪ್ಟೆಂಬರ್ 19ರಂದು ಬೆಳಗ್ಗೆ ಅವರಿಗೆ ಅಪರಿಚಿತ ವ್ಯಕ್ತಿಯಿಂದ ಕರೆ ಬಂದಿದೆ. ತಾನು ಗೂಗಲ್ನಲ್ಲಿ ಹುಡುಕುತ್ತಿದ್ದ ಬಿಎಸ್ಎನ್ಎಲ್ ಕಸ್ಟಮರ್ ಕೇರ್ ಪ್ರತಿನಿಧಿ ಎಂದು ಪರಿಚಯಿಸಿಕೊಂಡ ವ್ಯಕ್ತಿ, ಬಳಿಕ ವಾಟ್ಸಾಪ್ ಕರೆ ಮೂಲಕ ಮಾತನಾಡಿದ್ದಾನೆ. ಈ ವೇಳೆ ಅಹಮದಾಬಾದ್ನಲ್ಲಿರುವ ತಮ್ಮ ಮಗನ ಮೊಬೈಲ್ಗೆ ನೆಟ್ವರ್ಕ್ ಸಮಸ್ಯೆ ಇರುವ ಬಗ್ಗೆ ರವೀಂದ್ರ ಮಾಹಿತಿ ನೀಡಿದ್ದಾರೆ. ಕೆಲವೇ ಕ್ಷಣಗಳಲ್ಲಿ ಅವರ ಖಾತೆಯಿಂದ ₹10 ಡೆಬಿಟ್ ಆಗಿರುವ ಸಂದೇಶ ಬಂದಿದ್ದು, ಅನುಮಾನಗೊಂಡು ಅವರು ಕರೆಯನ್ನು ಕಡಿತಗೊಳಿಸಿದ್ದಾರೆ. ಬ್ಯಾಂಕ್ ಮ್ಯಾನೇಜರ್ಗೆ ಮಾಹಿತಿ ನೀಡಿದ ಬಳಿಕ ಕೆಲವೇ ನಿಮಿಷಗಳಲ್ಲಿ ಅವರ ಖಾತೆಯಿಂದ ₹75 ಸಾವಿರ ಹಣ ವರ್ಗಾವಣೆಯಾಗಿರುವುದು ಬೆಳಕಿಗೆ ಬಂದಿದೆ. ಇದೇ ವೇಳೆ ರವೀಂದ್ರ ಅವರ ಮೊಬೈಲ್ ಕೂಡ ಸಂಪೂರ್ಣವಾಗಿ ಆಫ್ ಆಗಿದೆ. ತಕ್ಷಣ ಪತ್ನಿಯ ಮೊಬೈಲ್ನಿಂದ 1930 ಸೈಬರ್ ಹೆಲ್ಪ್ಲೈನ್ಗೆ ಕರೆ ಮಾಡಿ ದೂರು ದಾಖಲಿಸಿದ್ದು, ನಂತರ ಬ್ಯಾಂಕ್ನಿಂದ ಪಡೆದ UPI ವಹಿವಾಟು ಸಂಖ್ಯೆಯನ್ನು ಸೈಬರ್ ಹೆಲ್ಪ್ಲೈನ್ಗೆ ನೀಡಿದ್ದಾರೆ. ವಂಚನೆಗೊಳಗಾದ ₹75 ಸಾವಿರ ಹಣವು ಅಭಿಷೇಕ್ ಎಂಬಾತನ ಖಾತೆಗೆ ವರ್ಗಾವಣೆಯಾಗಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಪ್ಪ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.




