
ಶೃಂಗೇರಿ: ಪರಿಸರ ಸೂಕ್ಷ್ಮ ಪ್ರದೇಶಗಳು ಎಂದು ಹೊರಡಿಸಿರುವ ಅಧಿಸೂಚನೆಯೂ ಆ ಭಾಗದಲ್ಲಿ ನೆಲೆಸಿರುವ ವಾಸಿಗರ ಹಾಗೂ ರೈತರಿಗೆ ಮಾರಕವಾದ ಕಾಯ್ದೆಯೇ ಹೊರತು ಅಭಿವೃದ್ಧಿಯ ಸೂಚಕವಲ್ಲ ಎಂದು ಪರಿಸರವಾದಿ ಕಲ್ಕುಳಿ ವಿಠ್ಠಲ ಹೆಗಡೆ ಆಕ್ಷೇಪಿಸಿದರು. ಶೃಂಗೇರಿಯಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಸರ್ಕಾರವು 2014 ರಿಂದ ಸರಣಿಯಾಗಿ ಈ ಅಧಿಸೂಚನೆಗಳನ್ನು ಹೊರಡಿಸುತ್ತಲೇ ಬಂದಿದ್ದು ಸಾರ್ವಜನಿಕವಾಗಿ ವಿರೋಧ ದಾಖಲಾಗುತ್ತಲೇ ಇದ್ದರೂ ಪರಿಗಣಿಸದೆ 2026ರ ಜುಲೈ 27ರಂದು ಹೊರಡಿಸಿದ ಆದೇಶ ಅವೈಜ್ಞಾನಿಕವಾಗಿದೆ. ಅದನ್ನು ಕೇಂದ್ರ ಸರ್ಕಾರ ಪುನರ್ ಪರಿಶೀಲಿಸಬೇಕು ಮತ್ತು ನಿಲುವನ್ನು ಸ್ಪಷ್ಟಪಡಿಸಬೇಕು, ರಾಜ್ಯ ಸರ್ಕಾರ ಈ ವರದಿಯನ್ನು ತಿರಸ್ಕರಿಸಬೇಕು ಎಂದು ಒತ್ತಾಯಿಸಿದ್ದಾರೆ. ಸೂಕ್ಷ್ಮ ಪ್ರದೇಶವೆಂದು ಗುರುತಿಸಿದ ಪ್ರದೇಶಗಳಲ್ಲಿ ನಡುವೆ ಇರುವ ಗ್ರಾಮಗಳನ್ನು ಬಿಟ್ಟಿರುವುದು ಅವೈಜ್ಞಾನಿಕ ಕ್ರಿಯೆ ಎಂದು ತಿಳಿಸಿದ ಅವರು ಮೂಲ ಸೌಕರ್ಯಗಳನ್ನೇ ಆ ಭಾಗದ ಜನತೆಗೆ ತಡೆಹಿಡಿಯಲಾಗುವುದು, ಬೆಳೆಗಳಿಗೆ ರಾಸಾಯನಿಕ ಬಳಸುವುದಕ್ಕೆ ಅರಣ್ಯದ ಒಳಗೆ ಪ್ರವೇಶಿಸುವುದಕ್ಕೆ ನಿರ್ಬಂಧ ವಿಧಿಸಬಹುದು ಹಾಗೂ ಮನೆ ನಿರ್ಮಾಣಕ್ಕೆ, ಜಮೀನುಗಳಿಗೆ ದಾಖಲೆಗಳನ್ನು ಕೋರಿದ ಸಂದರ್ಭದಲ್ಲಿ ಅರಣ್ಯ ಇಲಾಖೆ ಬೇರೆಬೇರೆ ಇಲಾಖೆಗಳಿಂದ ಒಟ್ಟಾರೆ ಕಿರುಕುಳವನ್ನು ಈ ಭಾಗದ ವಾಸಿಗರು ಸದಾ ಅನುಭವಿಸಬೇಕಾಗುತ್ತದೆ. ಯಾವುದೇ ಪರಿಸರ ಯೋಜನೆಗಳು ಜನರ ಸಹಕಾರವಿಲ್ಲದೆ ಫಲಪ್ರದವಾಗುವುದಿಲ್ಲ. ಈ ಯೋಜನೆಗಳ ಮೂಲಕ ಜನರಿಗೆ ಹಿಂಸೆ ನೀಡಿ ತಾವಾಗಿಯೇ ತೊರೆದು ಹೋಗಬೇಕೆನ್ನುವ ಹುನ್ನಾರ ಅಡಗಿದೆ ಆದ್ದರಿಂದ ಈ ಯೋಜನೆಯನ್ನು ಕೂಡಲೇ ಕೈ ಬಿಡಬೇಕು ಎಂದು ಒತ್ತಾಯಿಸಿದ್ದಾರೆ.ಪತ್ರಿಕಾಗೋಷ್ಠಿಯಲ್ಲಿ ಜನಶಕ್ತಿ ಸಂಘಟನೆಯ ವೆಂಕಟೇಶ್ ಹಾಗಲಗಂಜಿ ಮತ್ತು ಪರಿಸರ ಜಾಗೃತಿ ವೇದಿಕೆಯ ಗಡಿಕಲ್ ಸುರೇಶ್ ಉಪಸ್ಥಿತರಿದ್ದರು.




