
ನರಸಿಂಹರಾಜಪುರ: ಮನುಕುಲದ ಮಾರ್ಗದರ್ಶಿಯಾಗಿ ಕಂಡುಬರುವ ಆದಿಕವಿ ವಾಲ್ಮೀಕಿಯವರ ರಾಮಾಯಣ ಮಹಾಕಾವ್ಯವು ತನ್ನೊಳಗಿನ ಪಾತ್ರಗಳ ಮೂಲಕ ಇಡೀ ಜಗತ್ತಿನ ಮನುಕುಲಕ್ಕೆ ಬದುಕಿನ ಶ್ರೇಷ್ಠ ದಾರಿಯನ್ನು ಪರಿಚಯಿಸುವ ಹಾಗೂ ಆ ದಾರಿಯನ್ನು ತೋರಿಸುವ ದಾರಿದೀಪವಾಗಿದೆ ಎಂದು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ವೈ.ಆರ್. ರಾಜೀವ್ ತಿಳಿಸಿದರು. ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯತ್ ಮತ್ತು ಸಮಾಜ ಕಲ್ಯಾಣ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಸೋಮವಾರ ಕನ್ನಡ ಭವನದಲ್ಲಿ ನಡೆದ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಾಲ್ಮೀಕಿಯವರು ರಚಿಸಿದ ರಾಮಾಯಣ ಮಹಾಕಾವ್ಯ ನಿಜವಾಗಿಯೂ ಈ ಭುವನದ ಭಾಗ್ಯವೇ ಸರಿ. ವಾಲ್ಮೀಕಿಯವರು ಮಹಾಕಾವ್ಯ ರಚನೆಕಾರರಾಗಿ, ವಾಗ್ಗೇಯಕಾರರಾಗಿ, ಆದಿಕವಿಯಾಗಿ, ಶಿಕ್ಷಣ ತಜ್ಞರಾಗಿ ಹಾಗೂ ಮಹರ್ಷಿಗಳಾಗಿ ಗುರುತಿಸಿಕೊಂಡಿದ್ದು, ಭಾರತೀಯ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುವ ಗ್ರಂಥವನ್ನು ನೀಡುವ ಮೂಲಕ ನಮ್ಮ ಸಂಸ್ಕೃತಿಯ ರಾಯಭಾರಿಯಾಗಿ ಹಾಗೂ ಸದಾ ನಮ್ಮೊಂದಿಗಿರುವ ಮಹಾಮಾರ್ಗದರ್ಶಕರಾಗಿ ಕಂಡುಬರುತ್ತಾರೆ ಎಂದರು. ನರಸಿಂಹರಾಜಪುರದ ಪ್ರಭಾರಿ ಗ್ರೇಡ್-2 ತಹಸೀಲ್ದಾರ್ ಸುಜಾತ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ತಾಲ್ಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಸುದೀಪ್, ಕ್ಷೇತ್ರ ಶಿಕ್ಷಣಾಧಿಕಾರಿ ದತ್ತಾತ್ರೇಯ ವಿ. ಯಾಜಿ, ಸಮಾಜ ಕಲ್ಯಾಣಾಧಿಕಾರಿ ಎ.ಕೆ. ಪಾಟೀಲ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಂಚಾಲಕ ಶೃಂಗೇರಿ ಸುಬ್ಬಣ್ಣ, ಸಿಡಿಪಿಒ ಅಧಿಕಾರಿ, ಅಕ್ಷರ ದಾಸೋಹ ಅಧಿಕಾರಿ, ದಲಿತ ಸಂಘರ್ಷ ಸಮಿತಿಯ ಕೆ.ಎಂ. ಗೋಪಾಲ್, ಎನ್. ಶಂಕರ್, ಜಲಜ, ಪರಿಶಿಷ್ಟ ಪಂಗಡದ ಮಹೇಶ್ ನಾಯ್ಕ್, ಶಿಕ್ಷಕ ವಿಜಯಕುಮಾರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.






