
ಕೊಟ್ಟಿಗೆಹಾರ: ಚಿಕ್ಕಮಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳನ್ನು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 173ರ ಚಾರ್ಮಾಡಿ ಘಾಟ್ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಅವೈಜ್ಞಾನಿಕ ಕಾಮಗಾರಿ ವಿರುದ್ಧ ಪರಿಸರ ಪ್ರೇಮಿಗಳು ಹಾಗೂ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸುಸ್ಥಿತಿಯಲ್ಲಿದ್ದ ರಸ್ತೆ ಬದಿಯ ತಡೆಗೋಡೆಗಳನ್ನು ತೆರವುಗೊಳಿಸಿ ಮರು ನಿರ್ಮಾಣ ಮಾಡಲಾಗುತ್ತಿದ್ದು, ಕೆಡವಲಾದ ಕಾಂಕ್ರೀಟ್ ಹಾಗೂ ಕಲ್ಲಿನ ಅವಶೇಷಗಳನ್ನು ಘಾಟಿಯ ಆಳವಾದ ಪ್ರಪಾತದ ಅಂಚಿಗೆ ಸುರಿಯಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಇದರಿಂದ ಕಣಿವೆಯ ಅಂಚಿನಲ್ಲಿರುವ ಸೂಕ್ಷ್ಮ ಸಸ್ಯವರ್ಗ, ಶೋಲಾ ಅರಣ್ಯ ಹಾಗೂ ವನ್ಯಜೀವಿಗಳ ನೈಸರ್ಗಿಕ ಆವಾಸಸ್ಥಾನಕ್ಕೆ ಹಾನಿಯಾಗುತ್ತಿದೆ ಎಂದು ಪರಿಸರ ಪ್ರೇಮಿಗಳು ಆತಂಕ ವ್ಯಕ್ತಪಡಿಸಿದ್ದಾರೆ. ಇನ್ನೊಂದೆಡೆ, ಚಾರ್ಮಾಡಿ ಘಾಟ್ನ ಸಮಗ್ರ ಉನ್ನತೀಕರಣಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಈಗಾಗಲೇ ಅನುದಾನ ಬಿಡುಗಡೆಯಾಗಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಚಾರ್ಮಾಡಿ ಗ್ರಾಮದಿಂದ ಚಿಕ್ಕಮಗಳೂರು ಜಿಲ್ಲೆಯ ಗಡಿಯವರೆಗೆ ಸುಮಾರು 11.2 ಕಿಲೋಮೀಟರ್ ರಸ್ತೆಯನ್ನು 5 ಮೀಟರ್ನಿಂದ 10 ಮೀಟರ್ ಅಗಲಕ್ಕೆ ವಿಸ್ತರಿಸಿ ದ್ವಿಪಥ ರಸ್ತೆಯನ್ನಾಗಿ ಅಭಿವೃದ್ಧಿಪಡಿಸುವ ಯೋಜನೆ ರೂಪಿಸಲಾಗಿದೆ. ದಕ್ಷಿಣ ಕನ್ನಡ ವ್ಯಾಪ್ತಿಯ 11 ಅಪಾಯಕಾರಿ ಹೇರ್ಪಿನ್ ತಿರುವುಗಳ ಅಭಿವೃದ್ಧಿಯೂ ಯೋಜನೆಯಲ್ಲಿ ಒಳಗೊಂಡಿದೆ. ಯೋಜನೆಯ ಪ್ರಾಥಮಿಕ ಸರ್ವೆ ಪೂರ್ಣಗೊಂಡಿದ್ದು, ಪರಿಷ್ಕೃತ ಅಲೈನ್ಮೆಂಟ್ ವರದಿಯನ್ನು ಕೇಂದ್ರ ಹೆದ್ದಾರಿ ಸಚಿವಾಲಯದ ಅನುಮೋದನೆಗೆ ಸಲ್ಲಿಸಲಾಗಿದೆ. ಆದರೆ, ಸಮಗ್ರ ಯೋಜನೆ ಅನುಷ್ಠಾನಕ್ಕೆ ಮುನ್ನವೇ ಪರಿಸರಕ್ಕೆ ಹಾನಿಯಾಗುವ ರೀತಿಯಲ್ಲಿ ಕಾಮಗಾರಿ ನಡೆಯುತ್ತಿದೆ ಎಂಬ ಆರೋಪ ಕೇಳಿಬಂದಿದೆ. ರಸ್ತೆ ಅಭಿವೃದ್ಧಿಯ ಹೆಸರಿನಲ್ಲಿ ದೃಢವಾಗಿರುವ ತಡೆಗೋಡೆಗಳನ್ನು ಅನಗತ್ಯವಾಗಿ ಒಡೆದು ಹಾಕುವುದರಿಂದ ಕೆಳಭಾಗದ ಪರಿಸರ ಸೂಕ್ಷ್ಮ ವಲಯಕ್ಕೆ ಕಲ್ಲು-ಮಣ್ಣು ಕುಸಿದು ಮರಗಳು, ಸಸ್ಯಗಳು ಹಾಗೂ ವನ್ಯಜೀವಿಗಳ ಆವಾಸಸ್ಥಾನಕ್ಕೆ ಹಾನಿಯಾಗುತ್ತಿದೆ ಎಂದು ಪರಿಸರ ಪ್ರೇಮಿ ಸಂಜಯ್ ಗೌಡ ಆರೋಪಿಸಿದ್ದಾರೆ. ದೊಡ್ಡ ಮಟ್ಟದ ಅವ್ಯವಹಾರ ನಡೆಯುತ್ತಿರುವ ಶಂಕೆಯಿದ್ದು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಕಾಮಗಾರಿಯನ್ನು ತಕ್ಷಣ ತಡೆದು ಸೂಕ್ತ ತನಿಖೆ ನಡೆಸಬೇಕು ಹಾಗೂ ಪಶ್ಚಿಮ ಘಟ್ಟದ ಸೂಕ್ಷ್ಮ ಪರಿಸರ ವ್ಯವಸ್ಥೆಗೆ ಹಾನಿಯಾಗದಂತೆ ವೈಜ್ಞಾನಿಕವಾಗಿ ಕಾಮಗಾರಿ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.




