ಚಾಮರಾಜನಗರ: ಜೆಎಸ್ಎಸ್ ಮಹಾವಿದ್ಯಾಪೀಠದ ಶಿಕ್ಷಣ, ಆರೋಗ್ಯ, ಅನ್ನದಾಸೋಹ ಸೇರಿದಂತೆ ವಿವಿಧ ಸೇವಾ ಕಾರ್ಯಗಳು ಸರ್ವರ ವಿಕಾಸಕ್ಕೆ ದಾರಿಯಾಗಿವೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷರು ಹಾಗೂ ರಾಷ್ಟ್ರ ಯುವ ಪ್ರಶಸ್ತಿ ಪುರಸ್ಕೃತರಾದ ಸುರೇಶ್ ಎನ್. ಋಗ್ವೇದಿ ಹೇಳಿದರು. ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಆಯೋಜಿಸಿದ್ದ ಜೆಎಸ್ಎಸ್ ಮಹಾವಿದ್ಯಾಪೀಠದ ಕೊಡುಗೆಗಳು ಹಾಗೂ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳ ಜನ್ಮದಿನದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸುಮಾರು 70 ವರ್ಷಗಳ ಹಿಂದೆ ಜೆಎಸ್ಎಸ್ ಮಹಾವಿದ್ಯಾಪೀಠ ಸ್ಥಾಪಿಸಿ ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿ ಮೂಡಿಸಿದ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳು ತಮ್ಮ ಜೀವನವನ್ನೇ ಸಮಾಜ ಸೇವೆಗೆ ಅರ್ಪಿಸಿಕೊಂಡ ಮಹಾನ್ ಸಂತರು ಎಂದು ಸ್ಮರಿಸಿದರು. ಚಾಮರಾಜನಗರ ಸೇರಿದಂತೆ ಮೈಸೂರು ಭಾಗದ ಗ್ರಾಮೀಣ ಪ್ರದೇಶಗಳಲ್ಲಿ ಶಿಕ್ಷಣ ಸಂಸ್ಥೆಗಳು ಹಾಗೂ ವಿದ್ಯಾರ್ಥಿ ನಿಲಯಗಳನ್ನು ಸ್ಥಾಪಿಸಿ ಲಕ್ಷಾಂತರ ಜನರಿಗೆ ಶಿಕ್ಷಣ, ಆರೋಗ್ಯ ಮತ್ತು ಧಾರ್ಮಿಕ ಸೇವೆ ಒದಗಿಸುವ ಮೂಲಕ ಜೆಎಸ್ಎಸ್ ಸಂಸ್ಥೆ ಮಹತ್ವದ ಕೊಡುಗೆ ನೀಡಿದೆ. ಶಿಕ್ಷಣ, ಆರೋಗ್ಯ, ಅನ್ನದಾಸೋಹದ ಜೊತೆಗೆ ಧರ್ಮ, ಸಂಸ್ಕೃತಿ, ಕಲೆ, ಸಾಹಿತ್ಯ, ಸಂಗೀತ, ನೃತ್ಯ, ನಾಟಕ, ಜನಪದ, ಕ್ರೀಡೆ, ಮಹಿಳಾ ವಿಕಾಸ ಹಾಗೂ ತಂತ್ರಜ್ಞಾನ ಸೇರಿದಂತೆ ವಿವಿಧ ಕ್ಷೇತ್ರಗಳ ಅಭಿವೃದ್ಧಿಗೂ ಸಂಸ್ಥೆ ಶ್ರಮಿಸಿದೆ ಎಂದರು. ತಮ್ಮ ಶಿಕ್ಷಣದ ಸಂದರ್ಭದಲ್ಲಿ ಮಕ್ಕಳಿಗೆ ಎದುರಾಗುತ್ತಿದ್ದ ಸಮಸ್ಯೆಗಳನ್ನು ಗಮನಿಸಿ ಜೆಎಸ್ಎಸ್ ಮಹಾವಿದ್ಯಾಪೀಠವನ್ನು ಸ್ಥಾಪಿಸಿದ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳ ಸೇವಾ ಮನೋಭಾವ ಎಲ್ಲರಿಗೂ ಪ್ರೇರಣೆಯಾಗಿದೆ. ಜಾತಿ-ಮತ ಭೇದವಿಲ್ಲದೆ ಸರ್ವರಿಗೂ ಸೇವೆ ಸಲ್ಲಿಸಿರುವ ಜೆಎಸ್ಎಸ್ ಸಂಸ್ಥೆಯ ಕೊಡುಗೆಗೆ ನಾವೆಲ್ಲರೂ ಸದಾಕಾಲ ಋಣಿಯಾಗಿರಬೇಕು ಎಂದು ಋಗ್ವೇದಿ ಹೇಳಿದರು. ಕಾರ್ಯಕ್ರಮದ ಮುಖ್ಯ ಅತಿಥಿ ತಮಿಳು ಸಂಘದ ಅಧ್ಯಕ್ಷ ಜಗದೀಶನ್ ಮಾತನಾಡಿ, ಮೈಸೂರು ಭಾಗದ ಸಮಗ್ರ ಅಭಿವೃದ್ಧಿಯಲ್ಲಿ ಜೆಎಸ್ಎಸ್ ಸಂಸ್ಥೆಯ ಪಾತ್ರ ಮಹತ್ವದ್ದಾಗಿದೆ. ಗಡಿ ಭಾಗವಾದ ಚಾಮರಾಜನಗರದಲ್ಲಿಯೂ ಶಿಕ್ಷಣ, ಆರೋಗ್ಯ ಹಾಗೂ ಧರ್ಮ ಸಂರಕ್ಷಣೆಗೆ ಸಂಸ್ಥೆ ನೀಡಿರುವ ಕೊಡುಗೆ ಶ್ಲಾಘನೀಯ ಎಂದರು. ಬರಹಗಾರ ಎಸ್. ಲಕ್ಷ್ಮಿ ನರಸಿಂಹ ಅವರು ಜೆಎಸ್ಎಸ್ ಸಂಸ್ಥೆಯ ಸೇವೆಯನ್ನು ಸದಾಕಾಲ ಸ್ಮರಿಸಬೇಕು ಎಂದು ಹೇಳಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಪದ್ಮ ಪುರುಷೋತ್ತಮ್ ಅವರು ಮಹಿಳಾ ಶಿಕ್ಷಣ ಹಾಗೂ ಗ್ರಾಮೀಣ ಮಕ್ಕಳ ಶಿಸ್ತುಬದ್ಧ ಶಿಕ್ಷಣಕ್ಕೆ ಜೆಎಸ್ಎಸ್ ಸಂಸ್ಥೆ ದಾರಿಯಾಗಿದೆ ಎಂದರು. ಕಾರ್ಯಕ್ರಮದಲ್ಲಿ ವೀರಶೆಟ್ಟಿ, ಶಿವಲಿಂಗಮೂರ್ತಿ, ನಿವೃತ್ತ ಶಿಕ್ಷಕಿ ಸರಸ್ವತಿ, ಬಿ.ಕೆ. ಆರಾಧ್ಯ, ಕುಮಾರ್ ನಾಗೇಶ್, ಮಂಜುನಾಥ್, ಸುರೇಶ್ ದೊಡ್ಡಮೋಳೆ, ಮುರುಗೇಶ್, ಮಂಜುಳಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.
