
ಮೂಡಿಗೆರೆ: ಮಲೆನಾಡಿನಲ್ಲಿ ಅರಣ್ಯ ಮತ್ತು ಕಂದಾಯ ಇಲಾಖೆಗಳ ಜಂಟಿ ಸರ್ವೆ ವೇಳೆ ತಲೆತಲಾಂತರಗಳಿಂದ ಸಾಗುವಳಿ ಮಾಡುತ್ತಿರುವ ಸಣ್ಣ ಮತ್ತು ಮಧ್ಯಮ ರೈತರು ಸಂಕಷ್ಟಕ್ಕೆ ಸಿಲುಕಿದ್ದು, ಮೊದಲು ಅರಣ್ಯ ಹಾಗೂ ಕಂದಾಯ ಭೂಮಿಯ ಗಡಿ ಗುರುತಿಸಿ ರೈತರ ಜಮೀನು ಉಳಿಸಬೇಕು ಎಂದು ಕರ್ನಾಟಕ ಧ್ವನಿ ಸಂಘ ಒತ್ತಾಯಿಸಿದೆ. ಸಂಘದ ತಾಲ್ಲೂಕು ಅಧ್ಯಕ್ಷ ಹೆಚ್.ಜಿ. ಜಯಕುಮಾರ್ ಮಾತನಾಡಿ, ಹಲವು ವರ್ಷಗಳಿಂದ ರೈತರು ಸಾಗುವಳಿ ಮಾಡುತ್ತಿರುವ ಜಾಗಗಳನ್ನು ಅರಣ್ಯ ಭೂಮಿ ಎಂದು ಗುರುತಿಸಿ ಒಕ್ಕಲೆಬ್ಬಿಸುವ ನೋಟಿಸ್ ನೀಡಲಾಗುತ್ತಿದೆ ಎಂಬ ಆತಂಕವಿದೆ ಎಂದು ಹೇಳಿದರು. ರೈತರ ಬಳಿ ಹಕ್ಕುಪತ್ರ, ಫಾರಂ 50, 53, 57ರ ಅರ್ಜಿಗಳು ಹಾಗೂ ಪಹಣಿ ಸೇರಿದಂತೆ ದಾಖಲೆಗಳಿದ್ದರೂ ಸರ್ವೆ ಸಂದರ್ಭದಲ್ಲಿ ಅವುಗಳಿಗೆ ಮಾನ್ಯತೆ ಸಿಗುತ್ತಿಲ್ಲ ಎಂಬ ಅಸಮಾಧಾನ ವ್ಯಕ್ತವಾಗಿದೆ. ಡೀಮ್ಡ್ ಫಾರೆಸ್ಟ್ ವ್ಯಾಪ್ತಿಯ ಜನವಸತಿ ಹಾಗೂ ಕೃಷಿ ಭೂಮಿಯ ಗೊಂದಲವನ್ನು ಶಾಶ್ವತವಾಗಿ ನಿವಾರಿಸಿ, ದಶಕಗಳಿಂದ ಸಾಗುವಳಿ ಮಾಡುತ್ತಿರುವ ರೈತರನ್ನು ಏಕಾಏಕಿ ಒಕ್ಕಲೆಬ್ಬಿಸಬಾರದು ಎಂದು ಆಗ್ರಹಿಸಲಾಯಿತು. ಈ ಕುರಿತು ಪ್ರಭಾರ ವಲಯ ಅರಣ್ಯಾಧಿಕಾರಿ ಶಿವಕುಮಾರ್ ಬಿ.ಹೆಚ್. ಅವರಿಗೆ ಮನವಿ ಸಲ್ಲಿಸಲಾಯಿತು. ಕರ್ನಾಟಕ ಧ್ವನಿ ಸಂಘದ ಗೌರವಾಧ್ಯಕ್ಷ ಹಾಗೂ ಪತ್ರಕರ್ತ ರಾಘವೇಂದ್ರ ಕೆಸವಳಲು ಮಾತನಾಡಿ, ಮೊದಲು ಜಂಟಿ ಸರ್ವೆ ನಡೆಸಿ ಅರಣ್ಯ ಹಾಗೂ ಕಂದಾಯ ಇಲಾಖೆಗೆ ಸೇರಿದ ಜಾಗವನ್ನು ಸ್ಪಷ್ಟವಾಗಿ ಗುರುತಿಸಬೇಕು. ಬಲಾಢ್ಯರ ಅಕ್ರಮ ಒತ್ತುವರಿ ವಿರುದ್ಧ ಕ್ರಮ ಕೈಗೊಳ್ಳದೆ ಸಣ್ಣ ರೈತರ ಮೇಲೆಯೇ ಕ್ರಮ ಕೈಗೊಳ್ಳುವುದು ಸರಿಯಲ್ಲ ಎಂದು ಹೇಳಿದರು. ಬಾಕಿ ಇರುವ ಎನ್ಒಸಿ ಹಾಗೂ ಅನ್ಯಕ್ರಾಂತ ಅರ್ಜಿಗಳನ್ನು ತ್ವರಿತವಾಗಿ ವಿಲೇವಾರಿ ಮಾಡುವಂತೆ ಒತ್ತಾಯಿಸಿದರು. ವಿಶ್ವ ಹಿಂದೂ ಪರಿಷತ್ ತಾಲ್ಲೂಕು ಅಧ್ಯಕ್ಷ ಸುದೈವ್ ಗುತ್ತಿ ಕೂಡ ರೈತರ ಜಮೀನಿನ ಗೊಂದಲಕ್ಕೆ ಶಾಶ್ವತ ಪರಿಹಾರ ನೀಡುವಂತೆ ಮನವಿ ಮಾಡಿದರು. ಮನವಿ ಸ್ವೀಕರಿಸಿದ ಪ್ರಭಾರ ವಲಯ ಅರಣ್ಯಾಧಿಕಾರಿ ಶಿವಕುಮಾರ್ ಬಿ.ಹೆಚ್., ಕಳಸ ಭಾಗದಲ್ಲಿ ಜಂಟಿ ಸರ್ವೆ ಆರಂಭವಾಗಿದ್ದು, ಶೀಘ್ರದಲ್ಲೇ ಮೂಡಿಗೆರೆ ಭಾಗದಲ್ಲೂ ಸರ್ವೆ ಆರಂಭಿಸಲಾಗುವುದು. ರೈತರ ಮನವಿಯನ್ನು ಪರಿಶೀಲಿಸಿ ಮೇಲಾಧಿಕಾರಿಗಳ ಗಮನಕ್ಕೆ ತರುವುದಾಗಿ ಭರವಸೆ ನೀಡಿದರು.




