ಕೊಟ್ಟಿಗೆಹಾರ: ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಸಮೀಪದ ದೇವನಗುಲ್ ಬಳಿ ಕಳಸಾದಿಂದ ಮೂಡಿಗೆರೆಗೆ ಸಿಮೆಂಟ್ ಶೀಟ್ಗಳನ್ನು ಸಾಗಿಸುತ್ತಿದ್ದ ಟ್ಯಾಕ್ಟರ್ ನಿಯಂತ್ರಣ ತಪ್ಪಿ ಹೆದ್ದಾರಿಯಲ್ಲೇ ಪಲ್ಟಿಯಾದ ಘಟನೆ ಸಂಭವಿಸಿದೆ. ಘಟನೆಯಲ್ಲಿ ಚಾಲಕನು ಕೂದಲಿನ ಅಂತರದಿಂದ ಪಾರಾಗಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ತಿಳಿದುಬಂದಿದೆ. ಟ್ಯಾಕ್ಟರ್ ಹೆದ್ದಾರಿಗೆ ಪಲ್ಟಿಯಾದ ಪರಿಣಾಮ ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಸಂಚಾರ ಸ್ಥಗಿತಗೊಂಡು, ಕೊಟ್ಟಿಗೆಹಾರ–ಹೊರನಾಡು–ಶೃಂಗೇರಿ ಸಂಪರ್ಕ ರಸ್ತೆಯಲ್ಲಿ ವಾಹನಗಳ ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಗಿ ಟ್ರಾಫಿಕ್ ಜಾಮ್ ನಿರ್ಮಾಣವಾಗಿತ್ತು. ಬಳಿಕ ಸ್ಥಳೀಯರ ಸಹಾಯದಿಂದ ಟ್ಯಾಕ್ಟರ್ ತೆರವುಗೊಳಿಸಲಾಗಿ ಸಂಚಾರ ಪುನಃ ಆರಂಭಗೊಂಡಿತು.
