ಮಲೆನಾಡಿನಲ್ಲಿ ನಿಲ್ಲದ ವರುಣ ಆರ್ಭಟದಿಂದಾಗಿ ನದಿಗಳು ಉಕ್ಕಿ ಹರಿಯುತ್ತಿದ್ದು, ಜಲಾಶಯಗಳ ಒಳ ಹರಿವಿನಲ್ಲಿ ಏರಿಕೆ ಕಂಡು ಬಂದಿದೆ. ಜಲಾಶಯಗಳಾದ ತುಂಗಾ, ಭದ್ರಾ ಹಾಗೂ ಲಿಂಗನಮಕ್ಕಿ ನೀರಿನ ಪ್ರಮಾಣ ಹೆಚ್ಚಾಗಿದೆ. ಗಾಜನೂರಿನ ಯುಂಗಾ ಜಲಾಶಯದ ಒಳ ಹರಿವು 73,415 ಕ್ಯೂಸೆಕ್ ಇದ್ದು, 76,615 ಕ್ಯೂಸೆಕ್ ನೀರನ್ನು ಹೊರ ಬಿಡಲಾಗಿದೆ. ಹೊರ ಹರಿವು ಮತ್ತುಷ್ಟು ಹೆಚ್ಚಾದರೆ ನಗರದ ನದಿ ಭಾಗದ ಇಳಿಜಾರು ಪ್ರದೇಶಗಳಿಗೆ ನೀರು ನುಗ್ಗುವ ಭೀತಿ ಎದುರಾಗಿದೆ. ಭದ್ರ ಜಲಾಶಯದಲ್ಲಿ 39,245 ಕ್ಯೂಸೆಕ್ ನೀರನ್ನು ಹೊರ ಬಿಡಲಾಗಿದೆ. ನದಿಗಳು ಅಪಾಯದ ಮಟ್ಟ ಮೀರ ಹರಿಯುತ್ತಿವೆ. ನದಿ ಪಾತ್ರದ ಕವಲುಗುಂದಿ ಏರಿಯಾದಲ್ಲಿ ಆರೇಳು ಮನೆಗಳಿಗೆ ನೀರು ನುಗ್ಗಿದ ಹಿನ್ನಲೆಯಲ್ಲಿ ನಗರ ಸಭೆ ಆಡಳಿತ ತಿರುವಳ್ಳುವರ್ ಸಮುದಾಯ ಭವನದಲ್ಲಿ ತಾತ್ಕಾಲಿಕ ಪುನರ್ವಸತಿ ಕೇಂದ್ರ ತೆರೆಯಲಾಗಿದ್ದು, ನಿವಾಸಿಗಳಿಗೆ ಅಗತ್ಯ ಸೌಲಭ್ಯ ಕಲ್ಪಿಸಲಾಗಿದೆ. ಹಾಗೆಯೇ ಲಿಂಗನಮಕ್ಕಿ ಜಲಾಶಯ ಭರ್ತಿಗೆ ಕೇವಲ ನಾಲ್ಕು ಅಡಿಗಳು ಬಾಕಿ ಇದೆ. ಭದ್ರ ಜಲಾಶದಿಂದ ಹೊರ ಹರಿವು ಹೆಚ್ಚಾದರೆ ಗುಂಡೂರಾವ್ ಶೆಡ್, ಅಂಬೆಡ್ಕರ್ ನಗರ, ಎಕಿನ್ಷಾ ಕಾಲೋನಿ ಮುಂತಾದ ಕಡೆಗಳಿಗೆ ನೀರು ನುಗ್ಗುವ ಆತಂಕ ಎದುರಾಗಿದೆ.
