
ಚಿಕ್ಕಮಗಳೂರು: ದೇಶಾದ್ಯಂತ ಸಾಮಾಜಿಕ ಜಾಲತಾಣಗಳಲ್ಲಿ “ಕಾಕ್ರೋಚ್ ಪಾರ್ಟಿ ಆಫ್ ಇಂಡಿಯಾ” ಟ್ರೆಂಡಿಂಗ್ ಆಗಿರುವ ಬೆನ್ನಲ್ಲೇ ಅದಕ್ಕೆ ಪ್ರತಿಯಾಗಿ “ಹಿಟ್ ಪಾರ್ಟಿ” ಹಾಗೂ “ಲಕ್ಷ್ಮಣರೇಖೆ ಪಾರ್ಟಿ” ಎಂಬ ಹೆಸರಿನ ಕೌಂಟರ್ ಪಕ್ಷ ಹುಟ್ಟಿಕೊಂಡಿರುವುದು ಗಮನ ಸೆಳೆದಿದೆ. ಕಾಫಿನಾಡು-ಮಲೆನಾಡು ಭಾಗದಲ್ಲಿ ಆರಂಭಗೊಂಡಿರುವ ಈ ವಿನೂತನ ಟ್ರೆಂಡ್ಗೆ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಕ್ಷೇತ್ರದ ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರು ಮೂಲದ ಜಗದೀಶ್ಚಂದ್ರ ನೇತೃತ್ವ ವಹಿಸಿದ್ದು, ಅವರನ್ನು ಹಿಟ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿ ಘೋಷಿಸಲಾಗಿದೆ ಎನ್ನಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಪಕ್ಷಕ್ಕೆ ಲಕ್ಷಾಂತರ ಮಂದಿ ಬೆಂಬಲ ವ್ಯಕ್ತಪಡಿಸುತ್ತಿದ್ದು, “ಜಿರಳೆಗಳಿಗೆ ನಾವು ಹೆದರುವುದಿಲ್ಲ” ಎಂಬ ಘೋಷಣೆಯೊಂದಿಗೆ ಹೊಸ ಟ್ರೆಂಡ್ ಆರಂಭವಾಗಿದೆ. ಕಾಕ್ರೋಚ್ಗಳ ವಿರುದ್ಧ ಹೋರಾಟದ ಪ್ರತೀಕವಾಗಿ ಹಿಟ್ (HIT) ಜಿರಳೆನಾಶಕ ಹಾಗೂ ಲಕ್ಷ್ಮಣರೇಖೆಯನ್ನು ಬಳಸುವ ಸಂದೇಶವನ್ನು ಹಂಚಿಕೊಳ್ಳಲಾಗುತ್ತಿದ್ದು, ಕಾಕ್ರೋಚ್ ಪಾರ್ಟಿ ಇರುವವರೆಗೆ ಹಿಟ್ ಪಕ್ಷದ ಕಾರ್ಯಕರ್ತರು ಲಕ್ಷ್ಮಣರೇಖೆ ಮತ್ತು ಹಿಟ್ ಬಳಸಿ ಜಿರಳೆಗಳನ್ನು ನಿಯಂತ್ರಿಸಲು ಸದಾ ಸಿದ್ಧರಿದ್ದಾರೆ ಎಂಬ ರೀತಿಯ ಪೋಸ್ಟ್ಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.




