
ನವದೆಹಲಿ: ಅಂತರರಾಷ್ಟ್ರೀಯ ಕಚ್ಚಾ ತೈಲ ಬೆಲೆ ಏರಿಕೆ ಹಾಗೂ ತೈಲ ಮಾರುಕಟ್ಟೆ ಕಂಪನಿಗಳ ಮೇಲಿನ ನಷ್ಟದ ಒತ್ತಡದ ಹಿನ್ನೆಲೆಯಲ್ಲಿ ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರಗಳನ್ನು ಹತ್ತು ದಿನಗಳ ಅವಧಿಯಲ್ಲಿ ಮೂರನೇ ಬಾರಿಗೆ ಹೆಚ್ಚಿಸಲಾಗಿದ್ದು, ಶನಿವಾರದಿಂದ ಪೆಟ್ರೋಲ್ ಲೀಟರ್ಗೆ 87 ಪೈಸೆ ಮತ್ತು ಡೀಸೆಲ್ ಲೀಟರ್ಗೆ 91 ಪೈಸೆ ಏರಿಕೆಯಾಗಿದೆ. ಇದರೊಂದಿಗೆ ಬೆಂಗಳೂರಿನಲ್ಲಿ ಪೆಟ್ರೋಲ್ ದರ ಲೀಟರ್ಗೆ 107.14 ರೂ. ಹಾಗೂ ಡೀಸೆಲ್ ದರ 95.04 ರೂ.ಗೆ ತಲುಪಿದೆ. ಇತ್ತೀಚೆಗೆ ತೈಲ ಕಂಪನಿಗಳು ಮೊದಲಿಗೆ ಲೀಟರ್ಗೆ ಸುಮಾರು 3 ರೂ. ಹೆಚ್ಚಳ ಮಾಡಿದ್ದರೆ, ಈ ವಾರದ ಆರಂಭದಲ್ಲಿ ಮತ್ತೆ 90 ಪೈಸೆ ಏರಿಕೆ ಮಾಡಿದ್ದವು. ದೆಹಲಿಯಲ್ಲಿ ಪೆಟ್ರೋಲ್ ದರ 99.51 ರೂ. ಹಾಗೂ ಡೀಸೆಲ್ 92.49 ರೂ. ಆಗಿದ್ದು, ಕೋಲ್ಕತ್ತಾದಲ್ಲಿ ಪೆಟ್ರೋಲ್ 110.57 ರೂ. ಮತ್ತು ಡೀಸೆಲ್ 96.04 ರೂ., ಮುಂಬೈನಲ್ಲಿ ಪೆಟ್ರೋಲ್ 107.56 ರೂ. ಮತ್ತು ಡೀಸೆಲ್ 94.05 ರೂ., ಚೆನ್ನೈನಲ್ಲಿ ಪೆಟ್ರೋಲ್ 104.54 ರೂ. ಮತ್ತು ಡೀಸೆಲ್ 96.16 ರೂ.ಗೆ ಏರಿಕೆಯಾಗಿದೆ. ಮಧ್ಯಪ್ರಾಚ್ಯದಲ್ಲಿನ ಉದ್ವಿಗ್ನ ಪರಿಸ್ಥಿತಿ, ಯುಎಸ್–ಇರಾನ್ ಶಾಂತಿ ಮಾತುಕತೆಗಳ ಸುತ್ತಲಿನ ಅನಿಶ್ಚಿತತೆ ಹಾಗೂ ಜಾಗತಿಕ ಪೂರೈಕೆ ಕುರಿತ ಕಳವಳಗಳಿಂದ ಕಚ್ಚಾ ತೈಲದ ಬೆಲೆಗಳು ತೀವ್ರ ಏರಿಳಿತ ಕಂಡಿದ್ದು, ಬ್ರೆಂಟ್ ಕಚ್ಚಾ ತೈಲದ ಬೆಲೆ ಬ್ಯಾರೆಲ್ಗೆ 104 ಡಾಲರ್ಗಿಂತ ಹೆಚ್ಚು ಹಾಗೂ ಯುಎಸ್ ವೆಸ್ಟ್ ಟೆಕ್ಸಾಸ್ ಇಂಟರ್ಮೀಡಿಯೇಟ್ ಕಚ್ಚಾ ತೈಲದ ಬೆಲೆ 97 ಡಾಲರ್ ಆಸುಪಾಸಿನಲ್ಲಿ ವಹಿವಾಟು ನಡೆಸಿದೆ. ಒಂದು ಹಂತದಲ್ಲಿ ಕಚ್ಚಾ ತೈಲದ ಬೆಲೆ ಬ್ಯಾರೆಲ್ಗೆ 111 ಡಾಲರ್ಗೆ ತಲುಪಿತ್ತು. ಜಾಗತಿಕ ಮಾರುಕಟ್ಟೆಯಲ್ಲಿ ಬೆಲೆ ಏರಿಕೆಯ ನಡುವೆಯೂ ತಿಂಗಳುಗಳ ಕಾಲ ದೇಶೀಯ ಇಂಧನ ದರಗಳನ್ನು ಸ್ಥಿರವಾಗಿಟ್ಟಿದ್ದ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಪ್ರತಿ ತಿಂಗಳು ಸುಮಾರು 1,000 ಕೋಟಿ ರೂ. ನಷ್ಟ ಅನುಭವಿಸುತ್ತಿದ್ದ ಹಿನ್ನೆಲೆ, ಆರ್ಥಿಕ ಹೊರೆಯನ್ನು ತಗ್ಗಿಸಲು ಈಗ ಬೆಲೆ ಪರಿಷ್ಕರಣೆಯ ಮೂಲಕ ಅದರ ಒಂದು ಭಾಗವನ್ನು ಗ್ರಾಹಕರ ಮೇಲೆ ವರ್ಗಾಯಿಸಲು ಮುಂದಾಗಿವೆ.




