
ಕಾರ್ಕಳ: ನೆಕ್ಲಾಜೆ ಶ್ರೀ ಕಾಳಿಕಾಂಬ ದೇವಸ್ಥಾನದ ಅಂಗ ಸಂಸ್ಥೆಯಾದ ಶ್ರೀ ವಿಶ್ವಕರ್ಮ ಮಹಿಳಾ ಮಂಡಳಿಯ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ವಿಜೃಂಭಣೆಯಿಂದ ನಡೆಯಿತು. ಇತ್ತೀಚೆಗೆ ನಡೆದ ಮಹಾಸಭೆಯಲ್ಲಿ ಮಂಡಳಿಯ 25 ಸದಸ್ಯರ ನೂತನ ಕಾರ್ಯಕಾರಿ ಸಮಿತಿಯನ್ನು ಆಯ್ಕೆ ಮಾಡಲಾಗಿದ್ದು, ಅಧ್ಯಕ್ಷರಾಗಿ ಕವಿತಾ ಹರೀಶ್, ಉಪಾಧ್ಯಕ್ಷರಾಗಿ ಪೂರ್ಣಿಮಾ ನಿತ್ಯಾನಂದ, ಕಾರ್ಯದರ್ಶಿಯಾಗಿ ಮಲ್ಲಿಕ ಗಣೇಶ್ ಹಾಗೂ ಕೋಶಾಧಿಕಾರಿಯಾಗಿ ಪೂರ್ಣಿಮಾ ಜಯಂತ್ ಆಯ್ಕೆಯಾದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಿಕಟಪೂರ್ವ ಅಧ್ಯಕ್ಷೆ ನಳಿನಿ ವಿಜಯೇಂದ್ರ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಗಾಯತ್ರಿ ಮಹಿಳಾ ಮಂಡಳಿಯ ಅಧ್ಯಕ್ಷರು ಹಾಗೂ ನೆಕ್ಲಾಜೆ ಶ್ರೀ ಕಾಳಿಕಾಂಬ ದೇವಸ್ಥಾನದ ಮಾಜಿ ಆಡಳಿತ ಮೊಕ್ತೇಸರ ಶಿಲ್ಪಿ ರಾಮಚಂದ್ರ ಆಚಾರ್ಯ, ಜೊತೆ ಮೊಕ್ತೇಸರರಾದ ನಿಟ್ಟೆ ಸುರೇಶ್ ಆಚಾರ್ಯ, ಪಿ. ರವಿ ಆಚಾರ್ಯ, ಪಿ. ವಸಂತ್ ಆಚಾರ್ಯ ಹಾಗೂ ಮಂಡಳಿಯ ಕೋಶಾಧ್ಯಕ್ಷೆ ಜ್ಯೋತಿ ರಮೇಶ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶೋಭಾ ಹಾಗೂ ವಿಜಯ ಭಾಸ್ಕರ್ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಉಪಾಧ್ಯಕ್ಷೆ ಕವಿತಾ ಹರೀಶ್ ಸ್ವಾಗತಿಸಿ ಅತಿಥಿಗಳನ್ನು ಬರಮಾಡಿಕೊಂಡರು. ಕಾರ್ಯದರ್ಶಿ ಗೀತಾ ಚಂದ್ರ ವಾರ್ಷಿಕ ವರದಿ ವಾಚಿಸಿ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿದರು. ನೂತನ ಪದಾಧಿಕಾರಿಗಳು ಮಹಿಳಾ ಮಂಡಳಿಯ ಚಟುವಟಿಕೆಗಳನ್ನು ಮತ್ತಷ್ಟು ಪರಿಣಾಮಕಾರಿಯಾಗಿ ವಿಸ್ತರಿಸಿ ಸಮಾಜಮುಖಿ ಕಾರ್ಯಕ್ರಮಗಳಿಗೆ ಹೆಚ್ಚಿನ ಆದ್ಯತೆ ನೀಡುವ ಸಂಕಲ್ಪ ವ್ಯಕ್ತಪಡಿಸಿದರು. ಕಾರ್ಯಕ್ರಮವು ಆತ್ಮೀಯ ಹಾಗೂ ಸೌಹಾರ್ದಯುತ ವಾತಾವರಣದಲ್ಲಿ ಯಶಸ್ವಿಯಾಗಿ ನೆರವೇರಿತು.




