
ಚಿಕ್ಕಮಗಳೂರು: ಕರ್ತವ್ಯ ನಿರತ ಪೊಲೀಸ್ ಪೇದೆ ಹಾಗೂ ಮಾಜಿ ಸೈನಿಕರಾಗಿದ್ದ ಸತೀಶ್ (53) ಹೃದಯಾಘಾತದಿಂದ ನಿಧನರಾಗಿರುವ ಘಟನೆ ಶೃಂಗೇರಿ ತಾಲೂಕಿನ ವ್ಯಾಪ್ತಿಯಲ್ಲಿ ನಡೆದಿದೆ. ಶೃಂಗೇರಿ ಪೊಲೀಸ್ ಠಾಣೆಯ 112 ಇ.ಆರ್.ಎಸ್ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿದ್ದ ಸತೀಶ್ ಅವರು ಕೊಪ್ಪ ತಾಲೂಕಿನ ಹರಿಹರಪುರದಲ್ಲಿ ಕರ್ತವ್ಯದಲ್ಲಿದ್ದ ವೇಳೆ ತೀವ್ರ ಹೃದಯಾಘಾತಕ್ಕೊಳಗಾಗಿದ್ದು, ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಮೂಲತಃ ಶೃಂಗೇರಿ ತಾಲೂಕಿನ ಕಿಗ್ಗಾ ಗ್ರಾಮದವರಾದ ಸತೀಶ್ ಅವರು 17 ವರ್ಷಗಳ ಕಾಲ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ್ದಲ್ಲದೇ, ಬಳಿಕ ಕಳೆದ 10 ವರ್ಷಗಳಿಂದ ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಕರ್ತವ್ಯದಲ್ಲಿದ್ದಾಗಲೇ ಅವರು ನಿಧನರಾಗಿರುವ ಘಟನೆ ಪೊಲೀಸ್ ಇಲಾಖೆ ಹಾಗೂ ಸಾರ್ವಜನಿಕ ವಲಯದಲ್ಲಿ ಸಂತಾಪ ವ್ಯಕ್ತವಾಗಿದೆ.




