ಪಾಲಿಮರ್ ಶೀಟ್ಗಳನ್ನು ಬಳಸಿಕೊಂಡು ೧೦ರೂ ಹಾಗೂ ೨೦ರೂ ಮುಖಬೆಲೆಯ ಪ್ಲಾಸ್ಟಿಕ್ ನೋಟುಗಳನ್ನು ಮುದ್ರಿಸಲು ಆರ್ಬಿಐ ಸಿದ್ದವಾಗಿದ್ದು, ನಕಲಿ ನೋಟುಗಳ ವ್ಯವಹಾರಕ್ಕೆ ಕಡಿವಾಣ ಹಾಕಲು ಆರ್ಬಿಐ ಮುಂದಾಗಿದೆ. ಆರ್ಬಿಐ ನ ನೋಟು ಮುದ್ರಣ ಸಂಸ್ಥೆಯಾದ “ಭಾರತೀಯ ರಿಸರ್ವ್ ಬ್ಯಾಂಕ್ ನೋಟು ಮುದ್ರಣ್ ಪ್ರೈವೇಟ್ ಲಿಮಿಟೆಡ್” ಗ್ಲೋಬಲ್ ಟೆಂಡರ್ ಅನ್ನು ಕರೆದಿದ್ದು, ಪ್ರಾಯೋಗಿಕವಾಗಿ ನೋಟುಗಳಿಗೆ ಪ್ಲಾಸ್ಟಿಕ್ ಹಾಳೆಗಳನ್ನು ಪೂರೈಸಲು ಜಾಗತಿಕ ಸಂಸ್ಥೆಗಳಿಂದ ಅರ್ಜಿ ಆಹ್ವಾನಿಸಿದೆ. ಕಾಗದದ ನೋಟುಗಳಿಗೆ ಹೋಲಿಸಿದರೆ ಈ ನೋಟುಗಳು ನೀರು, ಕೊಳಕು ಮತ್ತು ಹರಿಯುವಿಕೆಗೆ ಹೆಚ್ಚಿನ ನಿರೋಧಕತೆ ಹೊಂದಿದ್ದು, ೪ ರಿಂದ ೫ ಪಟ್ಟು ಹೆಚ್ಚು ಕಾಲ ಬಾಳಿಕೆಗೆ ಬರುತ್ತದೆ. ಕಳ್ಳ ನೋಟುಗಳ ಹಾವಳಿಯನ್ನು ನಿಯಂತ್ರಿಸಲು ಈ ನೋಟುಗಳಲ್ಲಿ ಪಾರದರ್ಶಕ ವಿಂಡೋ, ಮೆಟಾಲಿಕ್ ನ್ಯೂಮರಲ್, ಮ್ಯಾಗ್ನೆಟಿಕ್ ಥ್ರೆಡ್ ಹಾಗೂ ನೆರಳು ಚಿತ್ರಗಳಂತಹ ಅತ್ಯಾಧುನಿಕ ಭದ್ರತಾ ಲಕ್ಷಣಗಳನ್ನು ಸೇರಿಸಲಾಗಿದೆ. ಪ್ಲಾಸ್ಟಿಕ್ ನೋಟು ಪೂರೈಕೆದಾರರು ಚೀನಾ ಮತ್ತು ಪಾಕಿಸ್ತಾನದೊಂದಿಗೆ ಸಂಪರ್ಕ ಹೊಂದಿರಬಾರದು ಮತ್ತು ಪ್ರಾಣಿಯ ಕೊಬ್ಬು ಬಳಸದಿರುವುದನ್ನು ದೃಢೀಕರಿಸಬೇಕು ಎಂಬ ನಿಯಮಗಳನ್ನು ಸೇರಿಸಲಾಗಿದೆ. ಪ್ರಸ್ತುತ ಚಾಲ್ತಿಯಲ್ಲಿರುವ ನೋಟುಗಳನ್ನು ತಕ್ಷಣ ಹಿಂಪಡೆಯುವುದು ಸುಳ್ಳು, ಈ ಯೋಜನೆ ಯಶಸ್ವಿಯಾದ ಬಳಿಕ ಹಂತ ಹಂತವಾಗಿ ಜಾರಿಗೆ ಬರಲಿದೆ.
