
ಚಿಕ್ಕಮಗಳೂರು: ಚಿಕ್ಕಮಗಳೂರಿನಲ್ಲಿ ಬೆಚ್ಚಿಬೀಳುವಂತಹ ಸೈಬರ್ ವಂಚನೆ ಪ್ರಕರಣ ಬೆಳಕಿಗೆ ಬಂದಿದ್ದು, ನಗರದ ಐಡಿಎಫ್ಸಿ ಬ್ಯಾಂಕ್ ಖಾತೆ ಹೊಂದಿದ್ದ ಮಹಿಳೆಯೊಬ್ಬರ ಖಾತೆಯಿಂದ ಓಟಿಪಿ ಅಥವಾ SMS ಅಲರ್ಟ್ ಕೂಡ ಬಾರದೆಯೇ ಬರೋಬ್ಬರಿ 18,24,000 ರೂಪಾಯಿ ಹಣವನ್ನು ಸೈಬರ್ ಖದೀಮರು ದೋಚಿದ್ದಾರೆ. ಸುಮಾರು ಒಂದೂವರೆ ತಿಂಗಳ ಕಾಲ ಹಂತಹಂತವಾಗಿ ಹಣ ವರ್ಗಾವಣೆ ನಡೆದಿದ್ದು, ಹಣ ಕಡಿತವಾಗುವ ವೇಳೆ ಬ್ಯಾಂಕ್ನಿಂದ ಬರಬೇಕಿದ್ದ ಓಟಿಪಿ ಹಾಗೂ SMS ಅಲರ್ಟ್ಗಳನ್ನು ಹ್ಯಾಕರ್ಗಳು ತಾಂತ್ರಿಕವಾಗಿ ಬ್ಲಾಕ್ ಮಾಡಿರುವ ಶಂಕೆ ವ್ಯಕ್ತವಾಗಿದೆ. ಖಾತೆಯಲ್ಲಿದ್ದ ಹಣ ಸಂಪೂರ್ಣ ಖಾಲಿಯಾಗಿರುವುದು ತಿಳಿದ ಬಳಿಕ ಮಹಿಳೆ ಬ್ಯಾಂಕ್ಗೆ ತೆರಳಿದಾಗ, ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಈ ಸೈಬರ್ ವಂಚನೆ ನಡೆಸಲಾಗಿದೆ ಎಂಬ ಮಾಹಿತಿ ಬ್ಯಾಂಕ್ ಅಧಿಕಾರಿಗಳಿಂದ ಲಭ್ಯವಾಗಿದೆ. ಸೈಬರ್ ಖದೀಮರು ಸಿಮ್ ಸ್ವಾಪಿಂಗ್ ಹಾಗೂ ಮ್ಯಾಲ್ವೇರ್ ಲಿಂಕ್ಗಳ ಮೂಲಕ ಮೊಬೈಲ್ ಮೇಲಿನ ನಿಯಂತ್ರಣ ಪಡೆದು ಬ್ಯಾಂಕ್ ಮಾಹಿತಿಗಳನ್ನು ಕದಿಯುತ್ತಿರುವುದು ಆತಂಕಕ್ಕೆ ಕಾರಣವಾಗಿದ್ದು, ಮೊಬೈಲ್ಗೆ ಬ್ಯಾಂಕ್ ಮೆಸೇಜ್ಗಳು ಬಾರದಿರುವುದು ಅಥವಾ ಸಿಗ್ನಲ್ ಸಮಸ್ಯೆ ಕಾಣಿಸಿಕೊಂಡರೆ ತಕ್ಷಣ ಬ್ಯಾಂಕ್ ಸಂಪರ್ಕಿಸುವಂತೆ ತಜ್ಞರು ಎಚ್ಚರಿಕೆ ನೀಡಿದ್ದಾರೆ. ಪ್ರಕರಣ ಸಂಬಂಧ ಚಿಕ್ಕಮಗಳೂರು ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.




