
ಚಿಕ್ಕಮಗಳೂರು: ಮೂಡಿಗೆರೆ ತಾಲೂಕಿನ ಪ್ರಸಿದ್ಧ ಎತ್ತಿನಭುಜ ಪ್ರವಾಸಿತಾಣದಲ್ಲಿ ಟ್ರೆಕ್ಕಿಂಗ್ಗೆ ಬಂದ ಪ್ರವಾಸಿಗರು ಮೂಲಭೂತ ಸೌಕರ್ಯಗಳ ಕೊರತೆಯಿಂದ ಪರದಾಡಿದ ಘಟನೆ ನಡೆದಿದೆ. ಕಳೆದ ಹಲವು ತಿಂಗಳಿನಿಂದ ಬಂದ್ ಆಗಿದ್ದ ಎತ್ತಿನಭುಜ ಚಾರಣವನ್ನು ಅರಣ್ಯ ಇಲಾಖೆ ಇತ್ತೀಚೆಗೆ ಪುನರಾರಂಭಿಸಿದ್ದು, ಯಾವುದೇ ಮುಂಜಾಗ್ರತಾ ಕ್ರಮ ಹಾಗೂ ಸೂಕ್ತ ವ್ಯವಸ್ಥೆ ಮಾಡದೆ ಟ್ರೆಕ್ಕಿಂಗ್ಗೆ ಅವಕಾಶ ನೀಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಆನ್ಲೈನ್ನಲ್ಲಿ ಟ್ರೆಕ್ಕಿಂಗ್ ಬುಕ್ ಮಾಡಿಕೊಂಡು ಎತ್ತಿನಭುಜಕ್ಕೆ ಆಗಮಿಸಿದ ಪ್ರವಾಸಿಗರಿಗೆ ದಟ್ಟ ಕಾಡಿನೊಳಗೆ ಯಾವ ಮಾರ್ಗದಲ್ಲಿ ಸಾಗಬೇಕು ಎಂಬುದೇ ತಿಳಿಯದೆ ಪರದಾಡುವಂತಾಗಿದೆ. ಗೈಡ್ಗಳ ವ್ಯವಸ್ಥೆಯೂ ಇಲ್ಲದ ಕಾರಣ ಕೆಲ ಪ್ರವಾಸಿಗರು ಚಾರಣದ ಮಾರ್ಗ ತಿಳಿಯದೆ ವಾಪಸ್ ತೆರಳಿದ್ದಾರೆ. ಮತ್ತೊಂದೆಡೆ, ರಸ್ತೆಯುದ್ದಕ್ಕೂ ಮರಗಳು ಬಿದ್ದಿದ್ದು, ಕೆಲವು ಕಡೆ ರಸ್ತೆ ಬ್ಲಾಕ್ ಆಗಿದ್ದರೂ ಚಾರಣಕ್ಕೆ ಅನುಮತಿ ನೀಡಲಾಗಿದೆ ಎಂದು ಪ್ರವಾಸಿಗರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. SOP ಪಾಲನೆ ಮಾಡದೆ, ಗೈಡ್ ಸೇರಿದಂತೆ ಅಗತ್ಯ ಮೂಲಭೂತ ಸೌಕರ್ಯಗಳ ವ್ಯವಸ್ಥೆ ಮಾಡದೆ ಟ್ರೆಕ್ಕಿಂಗ್ ಪುನರಾರಂಭಿಸಿರುವುದು ಪ್ರವಾಸಿಗರ ಆಕ್ರೋಶಕ್ಕೆ ಕಾರಣವಾಗಿದೆ. ಎತ್ತಿನಭುಜದಲ್ಲಿ 5 ಕಿಲೋಮೀಟರ್ ಚಾರಣಕ್ಕೆ ಅರಣ್ಯ ಇಲಾಖೆ 300 ರೂಪಾಯಿ ಶುಲ್ಕ ನಿಗದಿ ಮಾಡಿದ್ದು, ಗೈಡ್ಗೆ ಪ್ರತ್ಯೇಕವಾಗಿ ಒಬ್ಬರಿಗೆ 75 ರೂಪಾಯಿ ದರ ನಿಗದಿಪಡಿಸಲಾಗಿದೆ ಎನ್ನಲಾಗಿದೆ. ಶುಲ್ಕ ಪಡೆಯುತ್ತಿದ್ದರೂ ಸೂಕ್ತ ವ್ಯವಸ್ಥೆ ಕಲ್ಪಿಸಿಲ್ಲ ಎಂದು ಪ್ರವಾಸಿಗರು ಆರೋಪಿಸಿದ್ದಾರೆ.
ವರದಿ: ಸಂತೋಷ್ ಅತ್ತಿಗೆರೆ





