ಕೊಟ್ಟಿಗೆಹಾರ: ಬಣಕಲ್-ಬಾಳೂರು ವಲಯ ಮಟ್ಟದ 14 ವರ್ಷ ವಯೋಮಿತಿಯೊಳಗಿನ ಕ್ರೀಡಾಕೂಟ ಹಾಗೂ ರಾಷ್ಟ್ರೀಯ ಕ್ರೀಡಾ ದಿನಾಚರಣೆಯನ್ನು ಬಣಕಲ್ ಪ್ರೌಢಶಾಲೆ ಆವರಣದಲ್ಲಿ ಆಯೋಜಿಸಲಾಯಿತು. ಶ್ರೀ ವಿದ್ಯಾಭಾರತಿ ವಿದ್ಯಾಸಂಸ್ಥೆಯ ಆತಿಥ್ಯದಲ್ಲಿ ನಡೆದ ಕ್ರೀಡಾಕೂಟದಲ್ಲಿ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡರು. ಕ್ರೀಡಾಕೂಟದಲ್ಲಿ ಬಾಲಕರ ವಿಭಾಗದ ವೈಯಕ್ತಿಕ ಸಮಗ್ರ ಪ್ರಶಸ್ತಿಯನ್ನು GHPS ಬಗ್ಗಸಗೂಡು ಹಾಗೂ ಶ್ರೀ ವಿದ್ಯಾಭಾರತಿ ಪ್ರೌಢಶಾಲೆ ಪಡೆದುಕೊಂಡವು. ಬಾಲಕಿಯರ ವಿಭಾಗದಲ್ಲಿಯೂ GHPS ಬಗ್ಗಸಗೂಡು ಹಾಗೂ ಬಣಕಲ್ ಪ್ರೌಢಶಾಲೆ ಸಮಗ್ರ ಪ್ರಶಸ್ತಿಗೆ ಭಾಜನವಾದವು. ಶಾಲಾ ಸಮಗ್ರ ಪ್ರಶಸ್ತಿಯನ್ನು ಶ್ರೀ ವಿದ್ಯಾಭಾರತಿ ವಿದ್ಯಾಸಂಸ್ಥೆ, ಬಣಕಲ್ ಹಾಗೂ GHPS ಬಗ್ಗಸಗೂಡು ಶಾಲೆಗಳು ಹಂಚಿಕೊಂಡವು. ಕ್ರೀಡಾಕೂಟವನ್ನು ಕಾಫಿ ಉದ್ಯಮಿ ಮೋಹನ್ ಬಾಳೂರು ಉದ್ಘಾಟಿಸಿ ಮಾತನಾಡಿ, ಕ್ರೀಡೆ ಪ್ರತಿಯೊಬ್ಬರ ದೇಹವನ್ನು ಸದೃಢಗೊಳಿಸುತ್ತದೆ. ಸದೃಢ ದೇಹದಲ್ಲಿ ಸದೃಢ ಮನಸ್ಸು ಇರುತ್ತದೆ ಎಂದು ಹೇಳಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮೂಡಿಗೆರೆ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಮತಿ ಮೀನಾಕ್ಷಿ ಮಾತನಾಡಿ, ಮಕ್ಕಳಲ್ಲಿ ಕ್ರೀಡಾ ಆಸಕ್ತಿಯನ್ನು ಬೆಳೆಸಿ, ಅವರನ್ನು ಕ್ರೀಡಾ ಕ್ಷೇತ್ರದಲ್ಲಿ ಸಾಧನೆಯತ್ತ ಪ್ರೋತ್ಸಾಹಿಸಲು ಶಾಲಾ ಕ್ರೀಡಾಕೂಟಗಳು ಸಹಕಾರಿಯಾಗಿವೆ. ರಾಷ್ಟ್ರೀಯ ಕ್ರೀಡಾ ದಿನದ ಮಹತ್ವವನ್ನೂ ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ವಿದ್ಯಾಭಾರತಿ ವಿದ್ಯಾಸಂಸ್ಥೆಯ ಅಧ್ಯಕ್ಷ ಬಿ. ಶಿವರಾಮ ಶೆಟ್ಟಿ ವಹಿಸಿದ್ದರು. ಕ್ರೀಡಾ ಕ್ಷೇತ್ರದಲ್ಲಿ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಿರುವ ಸಂಸ್ಥೆಯ ಹಳೆಯ ವಿದ್ಯಾರ್ಥಿಗಳಾದ ಆಶಿಕ್, ಶ್ರೀಜಿತ್, ಸಮರ್ಥ್, ಪ್ರಶಾಂತ್ ಹಾಗೂ ಭೂಮಿಕಾ ಅವರು ಕ್ರೀಡಾ ಜ್ಯೋತಿಯೊಂದಿಗೆ ಕ್ರೀಡಾಂಗಣ ಪ್ರವೇಶಿಸಿದರು. ವಿದ್ಯಾರ್ಥಿಗಳು ನಡೆಸಿಕೊಟ್ಟ ಉದ್ಘಾಟನಾ ನೃತ್ಯ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿತ್ತು. ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜರೀನಾ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಶಿಕ್ಷಕರು, ಪೋಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವರದಿ: ಸಂತೋಷ್ ಅತ್ತಿಗೆರೆ
