ಚಿಕ್ಕಮಗಳೂರು: ಪೊಲೀಸರ ದಾಳಿಗೆ ಹೆದರಿ ಓಡುವಾಗ ಜಾರಿ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಕಡಬಗೆರೆ ಸಮೀಪದ ಕಾಫಿತೋಟದಲ್ಲಿ ನಡೆದಿದೆ. ಗುಡ್ಡೆಕೊಪ್ಪ ಗ್ರಾಮದ ರಮೇಶ್ (35) ಮೃತ ದುರ್ದೈವಿ. ಬಾಸಾಪುರ ಅರಣ್ಯ ಪ್ರದೇಶದಲ್ಲಿ ಅಂದರ್-ಬಾಹರ್ ಜೂಜಾಟ ನಡೆಯುತ್ತಿರುವ ಬಗ್ಗೆ ಮಾಹಿತಿ ಪಡೆದ ಬಾಳೆಹೊನ್ನೂರು ಪೊಲೀಸರು ದಾಳಿ ನಡೆಸಿದ್ದಾರೆ ಎನ್ನಲಾಗಿದೆ. ಈ ವೇಳೆ ಜೂಜಾಟದಲ್ಲಿ ತೊಡಗಿದ್ದ ಗುಂಪು ಪೊಲೀಸರನ್ನು ಕಂಡು ಓಡಲು ಮುಂದಾಗಿದೆ. ರಮೇಶ್ ಕೂಡ ಭಯದಿಂದ ಓಡುವಾಗ ಜಾರಿ ಬಿದ್ದು, ತಲೆ ಬಂಡೆಗೆ ಬಡಿದು ಗಂಭೀರವಾಗಿ ಗಾಯಗೊಂಡಿದ್ದಾರೆ. ಬಳಿಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಘಟನೆಯ ಬಳಿಕ ಕಳೆದ ರಾತ್ರಿ ರಮೇಶ್ ಮನೆಗೆ ಹಿಂದಿರುಗದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಆತಂಕಗೊಂಡಿದ್ದರು. ಇಂದು ಹುಡುಕಾಟ ನಡೆಸಿದಾಗ ತಲೆಯಲ್ಲಿ ರಕ್ತಸ್ರಾವವಾಗಿದ್ದ ಸ್ಥಿತಿಯಲ್ಲಿ ಕಾಫಿತೋಟದಲ್ಲಿ ರಮೇಶ್ ಮೃತದೇಹ ಪತ್ತೆಯಾಗಿದೆ. ಘಟನಾ ಸ್ಥಳದಲ್ಲಿದ್ದ ಒಂಬತ್ತು ಜನರ ಪೈಕಿ ಇಬ್ಬರನ್ನು ಬಾಳೆಹೊನ್ನೂರು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅರಣ್ಯ ಪ್ರದೇಶದಲ್ಲಿ ನಿರಂತರವಾಗಿ ಅಂದರ್-ಬಾಹರ್ ಜೂಜಾಟ ನಡೆಯುತ್ತಿತ್ತು ಎನ್ನಲಾಗಿದ್ದು, ಈ ಸಂಬಂಧ ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರದಿ: ಸಂತೋಷ್ ಅತ್ತಿಗೆರೆ
