
ಬೆಂಗಳೂರು: ರಾಜ್ಯದ ಪ್ರಮುಖ ಜಲಾಶಯಗಳ ನೀರಿನ ಮಟ್ಟದಲ್ಲಿ ಮಹತ್ವದ ಬದಲಾವಣೆ ಕಂಡುಬಂದಿದೆ. ಕೆಆರ್ಎಸ್, ಆಲಮಟ್ಟಿ ಹಾಗೂ ಬಸವಸಾಗರ ಜಲಾಶಯಗಳು ಗರಿಷ್ಠ ಮಟ್ಟದ ಸಮೀಪದಲ್ಲಿದ್ದು, ಕೆಲವು ಜಲಾಶಯಗಳಿಂದ ಭಾರೀ ಪ್ರಮಾಣದಲ್ಲಿ ನೀರು ಹೊರಬಿಡಲಾಗುತ್ತಿದೆ. ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನಲ್ಲಿರುವ ಕೆಆರ್ಎಸ್ ಜಲಾಶಯದಿಂದ ತಮಿಳುನಾಡಿಗೆ ಹೆಚ್ಚುವರಿ ನೀರು ಹರಿಸಲಾಗುತ್ತಿದೆ. ಇದಕ್ಕೆ ರಾಜ್ಯದ ರೈತ ಸಮುದಾಯದಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಕೆಆರ್ಎಸ್ ಜಲಾಶಯದ ಇಂದಿನ ಸ್ಥಿತಿ: 124.80 ಅಡಿ ಗರಿಷ್ಠ ಮಟ್ಟ ಹೊಂದಿರುವ ಕೆಆರ್ಎಸ್ನಲ್ಲಿ ಸದ್ಯ ನೀರಿನ ಮಟ್ಟ 110.04 ಅಡಿಯಷ್ಟಿದೆ. ಜಲಾಶಯಕ್ಕೆ 5,426 ಕ್ಯೂಸೆಕ್ ಒಳಹರಿವು ಇದ್ದರೆ, 7,170 ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ. ಒಟ್ಟು 49.452 ಟಿಎಂಸಿ ಸಾಮರ್ಥ್ಯವಿರುವ ಜಲಾಶಯದಲ್ಲಿ ಸದ್ಯ 31.381 ಟಿಎಂಸಿ ನೀರು ಸಂಗ್ರಹವಾಗಿದೆ.
ಇನ್ನು ವಿಜಯಪುರ ಜಿಲ್ಲೆಯ ಆಲಮಟ್ಟಿ ಜಲಾಶಯ ಭರ್ತಿಯಾಗುವ ಹಂತ ತಲುಪಿದೆ. 519.60 ಮೀಟರ್ ಗರಿಷ್ಠ ಮಟ್ಟ ಹೊಂದಿರುವ ಆಲಮಟ್ಟಿಯಲ್ಲಿ ಸದ್ಯ 519.56 ಮೀಟರ್ ನೀರಿನ ಮಟ್ಟ ದಾಖಲಾಗಿದೆ. ಜಲಾಶಯಕ್ಕೆ 21,878 ಕ್ಯೂಸೆಕ್ ಒಳಹರಿವು ಇದ್ದು, 23,903 ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ.
ಯಾದಗಿರಿ ಜಿಲ್ಲೆಯ ಬಸವಸಾಗರ ಜಲಾಶಯವೂ ಗರಿಷ್ಠ ಮಟ್ಟದ ಸಮೀಪದಲ್ಲಿದೆ. 492.25 ಮೀಟರ್ ಗರಿಷ್ಠ ಮಟ್ಟ ಹೊಂದಿರುವ ಜಲಾಶಯದಲ್ಲಿ ಸದ್ಯ 492.23 ಮೀಟರ್ ನೀರಿನ ಮಟ್ಟ ಇದೆ. ಒಳಹರಿವು 20,000 ಕ್ಯೂಸೆಕ್ ಇದ್ದರೆ, 16,000 ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ.
ಇನ್ನು ಮಲೆನಾಡಿನ ಲಿಂಗನಮಕ್ಕಿ ಜಲಾಶಯದಲ್ಲೂ ನೀರಿನ ಮಟ್ಟ ಏರಿಕೆಯಾಗಿದೆ. 1819 ಅಡಿ ಗರಿಷ್ಠ ಮಟ್ಟ ಹೊಂದಿರುವ ಜಲಾಶಯದಲ್ಲಿ ಸದ್ಯ 1798 ಅಡಿ ನೀರಿನ ಮಟ್ಟ ದಾಖಲಾಗಿದೆ. ಒಳಹರಿವು 11,256 ಕ್ಯೂಸೆಕ್ ಇದ್ದು, ಇಂದಿನ ನೀರಿನ ಏರಿಕೆ 0.30 ಅಡಿ ಎಂದು ವರದಿಯಾಗಿದೆ.



