
ಮಂಡ್ಯ: ಜಿಲ್ಲೆಯ ಶ್ರೀ ಕ್ಷೇತ್ರ ಆದಿಚುಂಚನಗಿರಿಯಲ್ಲಿ ಏಪ್ರಿಲ್ 15ರಂದು ಶ್ರೀ ಭೈರವೈಕ್ಯ ಬಾಲಗಂಗಾಧರನಾಥ ಸ್ವಾಮೀಜಿಯವರ ಮಂದಿರ ಲೋಕಾರ್ಪಣೆಗೆ ಪ್ರಧಾನಿ ನರೇಂದ್ರ ಮೋದಿ ಆಗಮಿಸಲಿರುವ ಹಿನ್ನೆಲೆ ಕ್ಷೇತ್ರದಲ್ಲಿ ಕಟ್ಟು ನಿಟ್ಟಿನ ಭದ್ರತಾ ವ್ಯವಸ್ಥೆ ಜಾರಿಗೆ ತರಲಾಗಿದ್ದು, SPG ಪಡೆ ಸಂಪೂರ್ಣ ನಿಯಂತ್ರಣ ವಹಿಸಿದೆ. ಈ ಹಿನ್ನೆಲೆಯಲ್ಲಿ 15ಕ್ಕೂ ಹೆಚ್ಚು ವಸ್ತುಗಳನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದ್ದು, ಬಿಡಿ, ಸಿಗರೇಟ್, ಲೈಟರ್, ತಂಬಾಕು ಉತ್ಪನ್ನಗಳು, ರಿಮೋಟ್ ಕೀ, ಟಾರ್ಚ್, ಲೇಸರ್ ಲೈಟ್, ರೇಡಿಯೋ ಸೇರಿದಂತೆ ಎಲ್ಲಾ ಎಲೆಕ್ಟ್ರಾನಿಕ್ ಗ್ಯಾಜೆಟ್ಗಳು, ಬ್ರೀಫ್ ಕೇಸ್, ಹ್ಯಾಂಡ್ ಬ್ಯಾಗ್, ಬ್ಯಾಕ್ ಪ್ಯಾಕ್, ವಾಟರ್ ಬಾಟಲ್, ತಿಂಡಿ ತಿನಿಸುಗಳು ಹಾಗೂ ಚಾಕುಗಳಂತಹ ಹರಿತವಾದ ವಸ್ತುಗಳನ್ನು ಮೈದಾನಕ್ಕೆ ತರಲು ಅವಕಾಶವಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನಿಯಮ ಉಲ್ಲಂಘಿಸಿದವರನ್ನು ಪ್ರವೇಶ ದ್ವಾರದಲ್ಲೇ ತಡೆಯಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ. ಇದೇ ವೇಳೆ ಪ್ರಧಾನಿ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಕಾಲಭೈರವನ ದರ್ಶನಕ್ಕೂ ನಿರ್ಬಂಧ ವಿಧಿಸಲಾಗಿದ್ದು, ಮಧ್ಯಾಹ್ನ 12:30ರವರೆಗೆ ಭಕ್ತರಿಗೆ ದರ್ಶನಕ್ಕೆ ಅವಕಾಶ ಇರುವುದಿಲ್ಲ. ಪ್ರಧಾನಿಗಳು ಶ್ರೀಗಿರಿ ತಪೋವನದ ಹೆಲಿಪ್ಯಾಡ್ನಿಂದ ರಸ್ತೆ ಮಾರ್ಗವಾಗಿ ಮಂದಿರಕ್ಕೆ ಆಗಮಿಸಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು, ಕಾರ್ಯಕ್ರಮ ಮುಗಿದ ಬಳಿಕವಷ್ಟೇ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುತ್ತದೆ. ಮೋದಿ ಅವರನ್ನು ಹತ್ತಿರದಿಂದ ನೋಡಲು ಬಯಸುವವರು ನಿಷೇಧಿತ ವಸ್ತುಗಳನ್ನು ಮನೆಯಲ್ಲೇ ಬಿಟ್ಟು ಬರಬೇಕೆಂದು ಸೂಚಿಸಲಾಗಿದೆ.




