
ನರಸಿಂಹರಾಜಪುರ: ಬಿಎಫ್ಐಎಲ್ ಸಂಸ್ಥೆಯ ಸೇಫ್ ಲಾಕರ್ನಲ್ಲಿದ್ದ ಚೆಕ್ನ್ನು ಮೇಲಾಧಿಕಾರಿಗಳ ಗಮನಕ್ಕೆ ಬಾರದಂತೆ ಪಡೆದು ₹5.50 ಲಕ್ಷ ಹಣವನ್ನು ಡ್ರಾ ಮಾಡಿಕೊಂಡು ದುರುಪಯೋಗಪಡಿಸಿಕೊಂಡ ಆರೋಪದ ಮೇಲೆ ಇಬ್ಬರು ಸಿಬ್ಬಂದಿ ವಿರುದ್ಧ ನರಸಿಂಹರಾಜಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನರಸಿಂಹರಾಜಪುರ ಶಾಖೆಯ ಬ್ರಾಂಚ್ ಮ್ಯಾನೇಜರ್ ಸುರೇಶ್ ಎನ್.ಕೆ. ಹಾಗೂ ಬ್ರಾಂಚ್ ಕ್ರೆಡಿಟ್ ಮ್ಯಾನೇಜರ್ ಹಾಗೂ ಕ್ಯಾಶಿಯರ್ ಸಂಜಯ್ ಎಂಬುವರ ವಿರುದ್ಧ ಪ್ರಕರಣ ದಾಖಲಾಗಿದೆ. ಪೊಲೀಸರಿಗೆ ನೀಡಿರುವ ದೂರಿನ ಪ್ರಕಾರ, ಸಂಸ್ಥೆಯ ಸೇಫ್ ಲಾಕರ್ನಲ್ಲಿದ್ದ 565986 ಮತ್ತು 565987 ಸಂಖ್ಯೆಯ ಎರಡು ಚೆಕ್ಗಳನ್ನು ಇಬ್ಬರೂ ಸೇರಿ ಮೇಲಾಧಿಕಾರಿಗಳ ಗಮನಕ್ಕೆ ಬಾರದಂತೆ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ. ಬಳಿಕ ಆಗಸ್ಟ್ 17ರಂದು ನರಸಿಂಹರಾಜಪುರ ಎಸ್ಬಿಐ ಶಾಖೆಯಲ್ಲಿ ಚೆಕ್ ನಂಬರ್ 565986 ಬಳಸಿ ₹5.50 ಲಕ್ಷ ಹಣವನ್ನು ಡ್ರಾ ಮಾಡಿಕೊಂಡು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ಇಬ್ಬರ ಕರ್ತವ್ಯದಲ್ಲಿ ಹಣದ ದುರುಪಯೋಗದ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ಬಂದ ಹಿನ್ನೆಲೆಯಲ್ಲಿ, ಆಗಸ್ಟ್ 17ರಂದೇ ಇಬ್ಬರನ್ನೂ ಅಮಾನತುಗೊಳಿಸಲು ಆದೇಶಿಸಲಾಗಿತ್ತು. ಆದರೆ, ಅಮಾನತು ಆದೇಶದ ದಿನವೇ ಇಬ್ಬರೂ ಸಂಸ್ಥೆಯ ಸೇಫ್ ಲಾಕರ್ನಿಂದ ಚೆಕ್ಗಳನ್ನು ತೆಗೆದುಕೊಂಡು ಹಣ ಪಡೆದುಕೊಂಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಸಂಬಂಧ ಬಿಎಫ್ಐಎಲ್ ಸಂಸ್ಥೆಯ ಯೂನಿಟ್ ಮ್ಯಾನೇಜರ್ ಸುನೀಲ್ ಅವರು ನರಸಿಂಹರಾಜಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಸುರೇಶ್ ಮತ್ತು ಸಂಜಯ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ. ದೂರಿನ ಆಧಾರದ ಮೇಲೆ ಪೊಲೀಸರು ಹಣ ದುರುಪಯೋಗ, ಅಪರಾಧಿಕ ನಂಬಿಕೆ ದ್ರೋಹ ಹಾಗೂ ಮೋಸಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.




