
ಚಿಕ್ಕಮಗಳೂರು: ವಿದೇಶದಿಂದ ಕೊರಿಯರ್ ಮೂಲಕ ಗಿಫ್ಟ್ ಕಳುಹಿಸುವುದಾಗಿ ನಂಬಿಸಿ, ವಿವಿಧ ಶುಲ್ಕಗಳ ನೆಪದಲ್ಲಿ ದಂಪತಿಯಿಂದ ಬರೋಬ್ಬರಿ 2.05 ಲಕ್ಷ ರೂಪಾಯಿ ಹಣವನ್ನು ಆನ್ಲೈನ್ ಮೂಲಕ ವರ್ಗಾವಣೆ ಮಾಡಿಸಿಕೊಂಡು ವಂಚಿಸಿರುವ ಘಟನೆ ವರದಿಯಾಗಿದೆ. ಫೇಸ್ಬುಕ್ ಮೂಲಕ ಪರಿಚಯವಾದ ಸ್ಕಾಟ್ಲ್ಯಾಂಡ್ನ ವ್ಯಕ್ತಿಯೊಬ್ಬರು, ಚಿಕ್ಕಮಗಳೂರು ಜಿಲ್ಲೆಯ ತೊಗರಿಹಂಕಲ್ ಗ್ರಾಮದ ಸರಸ್ವತಿ ಎಂಬುವವರಿಗೆ ಕಾಸ್ಮೆಟಿಕ್ಸ್ ಸೇರಿದಂತೆ ಕೆಲವು ಉಡುಗೊರೆಗಳನ್ನು ಕಳುಹಿಸುವುದಾಗಿ ನಂಬಿಸಿದ್ದರು. ಇದನ್ನು ನಂಬಿದ ಸರಸ್ವತಿ ಅವರು ತಮ್ಮ ಮನೆಯ ವಿಳಾಸವನ್ನು ಹಂಚಿಕೊಂಡಿದ್ದರು. ಬಳಿಕ ದೆಹಲಿ ವಿಮಾನ ನಿಲ್ದಾಣದಲ್ಲಿ ಗಿಫ್ಟ್ ಕೊರಿಯರ್ ಬಂದಿದ್ದು, ಅದನ್ನು ಮನೆಗೆ ತಲುಪಿಸಲು ಕೊರಿಯರ್ ಶುಲ್ಕ ಪಾವತಿಸಬೇಕೆಂದು ಅಪರಿಚಿತ ಮಹಿಳೆಯೊಬ್ಬರು ಕರೆ ಮಾಡಿ ತಿಳಿಸಿದ್ದಾರೆ. ಅವರ ಮಾತನ್ನು ನಂಬಿದ ಸರಸ್ವತಿ ಅವರು ಫೋನ್ ಪೇ ಮೂಲಕ 35 ಸಾವಿರ ರೂಪಾಯಿ ವರ್ಗಾವಣೆ ಮಾಡಿದ್ದಾರೆ. ಇದಾದ ಬಳಿಕ ಗಿಫ್ಟ್ನಲ್ಲಿ 80 ಪೌಂಡ್ ಹಣವಿದ್ದು, ಅದನ್ನು ಪಡೆಯಲು ಜಿಎಸ್ಟಿ ಪಾವತಿಸಬೇಕೆಂದು ತಿಳಿಸಿ, ಮತ್ತೊಮ್ಮೆ 1 ಲಕ್ಷದ 70 ಸಾವಿರ ರೂಪಾಯಿಗಳನ್ನು ಆರ್ಟಿಜಿಎಸ್ ಮೂಲಕ ವರ್ಗಾವಣೆ ಮಾಡಿಸಿಕೊಂಡಿದ್ದಾರೆ. ಹೀಗೆ ಒಟ್ಟು 2 ಲಕ್ಷದ 5 ಸಾವಿರ ರೂಪಾಯಿಗಳನ್ನು ದಂಪತಿಯಿಂದ ಪಡೆದು ವಂಚಿಸಲಾಗಿದೆ. ನಂತರವೂ ಹಣ ವರ್ಗಾಯಿಸುವಂತೆ ಕರೆ ಬಂದ ಹಿನ್ನೆಲೆಯಲ್ಲಿ ಅನುಮಾನಗೊಂಡ ದಂಪತಿ ವಿಚಾರಿಸಿದಾಗ ತಾವು ಸೈಬರ್ ವಂಚನೆಗೆ ಒಳಗಾಗಿರುವುದು ಬೆಳಕಿಗೆ ಬಂದಿದೆ. ತಕ್ಷಣವೇ 1930 ಸೈಬರ್ ಸಹಾಯವಾಣಿಗೆ ಕರೆ ಮಾಡಿ ದೂರು ದಾಖಲಿಸಿದ್ದಾರೆ. ಈ ಸಂಬಂಧ ಪ್ರದೀಪ್ ಹೆಚ್.ಬಿ. ಅವರು ನೀಡಿದ ದೂರಿನ ಮೇರೆಗೆ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವಂಚಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಮನವಿ ಮಾಡಿದ್ದಾರೆ.






