
ಮಣಿಪಾಲ: ಅಂಗನ್ಯೂನತೆ ಹೊಂದಿರುವವರು ಸ್ವಾವಲಂಬಿ ಜೀವನ ನಡೆಸಲು ನೆರವಾಗುವ ಉದ್ದೇಶದಿಂದ ರೋಟರಿ ಕ್ಲಬ್ ಮಣಿಪಾಲ ವತಿಯಿಂದ 7ನೇ ಉಚಿತ ಕೃತಕ ಅಂಗಾಂಗ ಮತ್ತು ಕ್ಯಾಲಿಪರ್ಸ್ ವಿತರಣೆ ಶಿಬಿರವನ್ನು ಆಯೋಜಿಸಲಾಗಿದೆ. 2015ರಿಂದ ನಿರಂತರವಾಗಿ ಈ ಸೇವಾ ಕಾರ್ಯವನ್ನು ನಡೆಸಿಕೊಂಡು ಬರುತ್ತಿರುವ ರೋಟರಿ ಕ್ಲಬ್, ಈ ಹಿಂದಿನ ಆರು ಶಿಬಿರಗಳ ಮೂಲಕ ತಲಾ ಸುಮಾರು 200 ಫಲಾನುಭವಿಗಳಿಗೆ ನೆರವಾಗಿದೆ. ಪ್ರತಿ ಶಿಬಿರಕ್ಕೆ ಸುಮಾರು 18 ಲಕ್ಷ ರೂಪಾಯಿ ವೆಚ್ಚ ಮಾಡಲಾಗಿದ್ದು, ನೂರಾರು ಮಂದಿಗೆ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಸಂಸ್ಥೆ ಸಹಕಾರ ನೀಡಿದೆ. ಬೆಂಗಳೂರಿನ ಶ್ರೀ ಭಗವಾನ್ ಮಹಾವೀರ್ ವಿಕಲಚೇತನರ ಸಹಾಯತಾ ಸಮಿತಿ ಹಾಗೂ ಎನ್-ಸ್ಟ್ರೈಡ್ ಸಹಯೋಗದಲ್ಲಿ ನಡೆಯುವ ಈ ಶಿಬಿರವು ಡಿಸೆಂಬರ್ 20, 21 ಮತ್ತು 22ರಂದು ಮಣಿಪಾಲದ ಅನಂತನಗರದಲ್ಲಿರುವ ರೋಟರಿ ಸ್ಪೋರ್ಟ್ಸ್ ಕಾಂಪ್ಲೆಕ್ಸ್ನಲ್ಲಿ ನಡೆಯಲಿದೆ. ಶಿಬಿರದಲ್ಲಿ ಪೋಲಿಯೋ ಪೀಡಿತರು, ಅಪಘಾತ ಹಾಗೂ ಜನ್ಮತಃ ಅಂಗನ್ಯೂನತೆ ಹೊಂದಿರುವವರಿಗೆ ಉಚಿತವಾಗಿ ಕೃತಕ ಕಾಲುಗಳು ಮತ್ತು ಕ್ಯಾಲಿಪರ್ಸ್ಗಳನ್ನು ಒದಗಿಸಲಾಗುತ್ತದೆ. ಜೊತೆಗೆ ಮಧುಮೇಹದಿಂದ ಉಂಟಾಗುವ ಕಾಲುಗಳ ಸಮಸ್ಯೆಗಳ ಕುರಿತು ತಪಾಸಣೆ ನಡೆಸಿ, ಅಗತ್ಯ ರಕ್ಷಣಾ ಕ್ರಮಗಳ ಬಗ್ಗೆ ಮಾಹಿತಿ ನೀಡಲಾಗುತ್ತದೆ. ಪ್ರತಿ ಕೃತಕ ಕಾಲಿಗೆ ಅಂದಾಜು 10 ಸಾವಿರ ರೂಪಾಯಿ ವೆಚ್ಚವಾಗಲಿದ್ದು, ಈ ಮಾನವೀಯ ಸೇವಾ ಕಾರ್ಯಕ್ಕೆ ದೇಣಿಗೆ ನೀಡಲು ಇಚ್ಛಿಸುವವರು ಆಯೋಜಕರನ್ನು ಸಂಪರ್ಕಿಸಬಹುದಾಗಿದೆ. ಶಿಬಿರದ ಸೌಲಭ್ಯ ಪಡೆಯಲು ಇಚ್ಛಿಸುವವರು ಡಿಸೆಂಬರ್ 10, 2026ರೊಳಗೆ ನೋಂದಣಿ ಮಾಡಿಕೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ ರೊ. ಪದ್ಮಾ ರಾವ್ – 9656082899, ರೊ. ಸೀಮಾ ಹಳ್ದಿಪುರ್ – 9845341617, ರೊ. ಸರಳಾ ರಾವ್ – 8880243255, ರೊ. ಸುಬೋಧ್ ಶೆಟ್ಟಿ – 9845514500 ಹಾಗೂ ರೊ. ಅರವಿಂದ್ ರಾವ್ – 8762371181 ಸಂಪರ್ಕಿಸಬಹುದು. ಹೊಂದಿರುವವರು ಆತ್ಮವಿಶ್ವಾಸದಿಂದ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ನೆರವಾಗುವ ಈ ಉಚಿತ ಶಿಬಿರದ ಸೌಲಭ್ಯವನ್ನು ಅರ್ಹ ಫಲಾನುಭವಿಗಳು ಸದುಪಯೋಗಪಡಿಸಿಕೊಳ್ಳುವಂತೆ ಆಯೋಜಕರು ಮನವಿ ಮಾಡಿದ್ದಾರೆ.




