
ಕೊಟ್ಟಿಗೆಹಾರ: ತರಿಮಲೇ ಪ್ರದೇಶದ ದಟ್ಟ ಕಾನನದ ಮಧ್ಯೆ ಇತಿಹಾಸ ಪ್ರಸಿದ್ಧ ಶ್ರೀ ತರಿಮಲೇ ಚೌಡಿ ಮಂಜ ಉತ್ಸವವು ಭಕ್ತಿಭಾವ ಹಾಗೂ ಸಂಪ್ರದಾಯಬದ್ಧವಾಗಿ ಅದ್ದೂರಿಯಾಗಿ ನೆರವೇರಿತು. ದೇವರ ಆದಿ ಸ್ಥಾನವೆಂದು ಪರಿಗಣಿಸಲ್ಪಡುವ ಈ ಉತ್ಸವದ ಅಂಗವಾಗಿ ಒಂದು ವಾರ ಮೊದಲು ಗೊನೆ ಕಡಿದು ದೇವಸ್ಥಾನದಲ್ಲಿ ಇಡುವ ಆಚರಣೆ ನಡೆಯುತ್ತಿದ್ದು, ಬುಧವಾರ ರಾತ್ರಿ ಬಂಡಾರ ತೆಗೆದು ಪೂಜಾ ವಿಧಿಗಳು ನೆರವೇರಿಸಲ್ಪಡುತ್ತವೆ. ಬೆಳಿಗ್ಗೆ 5 ಗಂಟೆಯೊಳಗೆ ದೇವರ ಮುಖ ನೋಡುವಂತಿಲ್ಲ ಎಂಬ ನಿಯಮ ಪಾಲಿಸಿ, ನಂತರ ಗುರುವಾರ ಬೆಳಿಗ್ಗೆ ದೇವರ ಬಂಡಾರವನ್ನು ತರಿಮಲೆಗೆ ಕೊಂಡೊಯ್ಯಲಾಗುತ್ತದೆ. ಅಲ್ಲಿ ಪುಣ್ಯ ಪೂಜೆ, ಪುನಸ್ಕಾರಗಳನ್ನು ನೆರವೇರಿಸಿ ನಂದಿ ಕಟ್ಟುವ ಮೂಲಕ ಮಂಜ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುತ್ತದೆ. ಬಳಿಕ ವಗಸಾಲಗಂಡಿ ಎಂಬ ಮಂಜ ನಡೆಯುವ ಸ್ಥಳಕ್ಕೆ ತೆರಳಿ, ಹಿಂದಿನ ಕಾಲದಲ್ಲಿ ಕೋಲ ನಡೆಯುತ್ತಿದ್ದ ಈ ಸ್ಥಳದಲ್ಲಿ ಈಗ ಹರಕೆ ವಿಧಿಗಳು ನಡೆಯುತ್ತಿದ್ದು, ಭಕ್ತರು 12 ಪ್ರಮುಖ ದೇವತೆಗಳಿಗೆ ಎಡೆ ಇಟ್ಟು, 101 ದೈವಗಳಿಗೆ ಪಂಜಲ್ಲಿ ದೀಪ ಹಚ್ಚಿ ಪೂಜೆ ಸಲ್ಲಿಸುತ್ತಾರೆ. ಮರದ ತೊಗಟೆಯಲ್ಲಿ ಆರತಿ ತಟ್ಟೆ ತಯಾರಿಸಿ ವಿಶೇಷ ಪೂಜೆ ನಡೆಸಿ ನಂತರ ಅನ್ನಪ್ರಸಾದ ವಿತರಣೆ ಮಾಡಲಾಗುತ್ತದೆ. ವರ್ಷಕ್ಕೊಮ್ಮೆ ಮಾತ್ರ ನಡೆಯುವ ಈ ವಿಶೇಷ ಉತ್ಸವದ ಎರಡನೇ ದಿನದ ಮೊದಲು ಮಂಗಳವಾರ ತರುವೆ ಗ್ರಾಮದ ಅಮ್ಮನವರ ದೇವಸ್ಥಾನದಲ್ಲಿ ವಾರ್ಷಿಕೋತ್ಸವ ನಡೆಯುವುದು ಸಂಪ್ರದಾಯವಾಗಿದ್ದು, ಅದರ ಮುಂದುವರಿದ ಭಾಗವಾಗಿ ಗುರುವಾರ ಮಂಜ ಉತ್ಸವ ಜರುಗುತ್ತದೆ. ನೆನ್ನೆ ನಡೆದ ಉತ್ಸವದಲ್ಲಿ ಸುತ್ತಮುತ್ತಲಿನ ಗ್ರಾಮಗಳ ಜೊತೆಗೆ ಬೆಂಗಳೂರು, ಹಾಸನ, ಮಂಗಳೂರು, ಶಿವಮೊಗ್ಗ, ಬಳ್ಳಾರಿ, ಹರಪನಹಳ್ಳಿ, ದಾವಣಗೆರೆ, ಮಡಿಕೇರಿ, ಅರಕಲಗೂಡು, ಮೈಸೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಸಾವಿರಾರು ಭಕ್ತರು ಆಗಮಿಸಿ ಕುರಿ, ಕೋಳಿ ಹರಕೆ ಸಲ್ಲಿಸಿ ದೇವಿ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು. ಕಾನನದ ನೈಸರ್ಗಿಕ ಸೌಂದರ್ಯದ ನಡುವೆ ನಡೆದ ಈ ಕಲಾವಳಿ ಉತ್ಸವ ಭಕ್ತರ ಮನಸ್ಸಿನಲ್ಲಿ ಆಧ್ಯಾತ್ಮಿಕ ಸ್ಪಂದನೆ ಮೂಡಿಸಿತು.




