
ಬೆಂಗಳೂರು: ಕಾನೂನು ಪದವಿ ಪೂರ್ಣಗೊಳಿಸಿ ಸರ್ಕಾರಿ ವಲಯದಲ್ಲಿ ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಕರ್ನಾಟಕ ವಿದ್ಯುತ್ ನಿಗಮ ನಿಯಮಿತ (KPCL) ಸುವರ್ಣಾವಕಾಶ ನೀಡಿದ್ದು, ಗುತ್ತಿಗೆ ಆಧಾರದ ಮೇಲೆ 02 ಸಹಾಯಕ ಕಾನೂನು ಅಧಿಕಾರಿ (Assistant Law Officer) ಹುದ್ದೆಗಳ ಭರ್ತಿಗೆ ಅಧಿಕೃತ ಅಧಿಸೂಚನೆ ಪ್ರಕಟಿಸಿದೆ. ಆಯ್ಕೆಯಾದ ಅಭ್ಯರ್ಥಿಗಳು ಬೆಂಗಳೂರಿನ ಕೆಪಿಸಿಎಲ್ ಪ್ರಧಾನ ಕಚೇರಿಯಲ್ಲಿ ಕಾರ್ಯನಿರ್ವಹಿಸಲಿದ್ದು, ಮಾಸಿಕ ₹65,000 ಸ್ಥಿರ ಸಂಭಾವನೆ ಜೊತೆಗೆ ನಿಯಮಾನುಸಾರ TA/DA ಸೌಲಭ್ಯ ಪಡೆಯಲಿದ್ದಾರೆ. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಮೂರು ಅಥವಾ ಐದು ವರ್ಷದ ಕಾನೂನು ಪದವಿ ಪಡೆದಿರಬೇಕು ಹಾಗೂ ಕನಿಷ್ಠ 40 ಶೇಕಡಾ ಅಂಕ ಗಳಿಸಿರಬೇಕು. ಜೊತೆಗೆ ಕರ್ನಾಟಕ ರಾಜ್ಯ ಬಾರ್ ಕೌನ್ಸಿಲ್ನಲ್ಲಿ ನೋಂದಣಿ ಪ್ರಮಾಣಪತ್ರ ಮತ್ತು ಗುರುತಿನ ಚೀಟಿ ಹೊಂದಿರುವುದು ಕಡ್ಡಾಯವಾಗಿದೆ. ಕರ್ನಾಟಕ ರಾಜ್ಯ ಆಡಳಿತ ನ್ಯಾಯಾಧಿಕರಣ (KSAT) ಹಾಗೂ ಉನ್ನತ ನ್ಯಾಯಾಲಯದಲ್ಲಿ ಅನುಭವ ಹೊಂದಿರುವವರಿಗೆ, ಜೊತೆಗೆ ಕಂಪ್ಯೂಟರ್ ಮತ್ತು ಇಂಗ್ಲಿಷ್ ಟೈಪಿಂಗ್ ಜ್ಞಾನ ಹೊಂದಿರುವವರಿಗೆ ಆದ್ಯತೆ ನೀಡಲಾಗುತ್ತದೆ. ಅಭ್ಯರ್ಥಿಗಳ ವಯಸ್ಸು 28 ರಿಂದ 56 ವರ್ಷಗಳೊಳಗಿರಬೇಕು. ನೇರ ಸಂದರ್ಶನದ ಮೂಲಕ ಆಯ್ಕೆ ನಡೆಯಲಿದ್ದು, ನೇಮಕಾತಿ ಆರಂಭದಲ್ಲಿ 6 ತಿಂಗಳ ಗುತ್ತಿಗೆ ಅವಧಿಗೆ ಸೀಮಿತವಾಗಿರುತ್ತದೆ. ಕಾರ್ಯಕ್ಷಮತೆ ತೃಪ್ತಿಕರವಾಗಿದ್ದರೆ ಪ್ರತಿ 6 ತಿಂಗಳಿಗೊಮ್ಮೆ ವಿಸ್ತರಿಸಿ ಗರಿಷ್ಠ 2 ವರ್ಷಗಳವರೆಗೆ ಮುಂದುವರಿಸಲಾಗುತ್ತದೆ. ಆಸಕ್ತ ಅಭ್ಯರ್ಥಿಗಳು ಕೆಪಿಸಿಎಲ್ ಅಧಿಕೃತ ವೆಬ್ಸೈಟ್ನಿಂದ ಅರ್ಜಿ ನಮೂನೆ ಡೌನ್ಲೋಡ್ ಮಾಡಿಕೊಂಡು ಅಗತ್ಯ ದಾಖಲೆಗಳೊಂದಿಗೆ ಜೂನ್ 22ರ ಸಂಜೆ 5.30ರೊಳಗೆ kpclcontractappt@gmail.com ಗೆ ಇ-ಮೇಲ್ ಮೂಲಕ ಅರ್ಜಿ ಸಲ್ಲಿಸಬೇಕು. ನಿಗದಿತ ಅವಧಿಯ ನಂತರ ಸಲ್ಲಿಕೆಯಾಗುವ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಕೆಪಿಸಿಎಲ್ ಸ್ಪಷ್ಟಪಡಿಸಿದೆ.



