
ಎಷ್ಟು ನಂಬಿದ್ದೆ ಗೊತ್ತಾ ನಾನಾಗಿಯೇ ಅವರ ಹಿಂದೆ ಹೋಗಿರಲಿಲ್ಲ.. ಛೇ ನಂಗೆ ಮೋಸ ಮಾಡಿಬಿಟ್ಟರು ಎಂದು ಆ ಹುಡುಗಿ ನಿಟ್ಟುಸಿರು ಬಿಟ್ಟಳು. ತನ್ನನ್ನು ಪಲ್ಲವಿ ಎಂದು ಪರಿಚಯಿಸಿಕೊಂಡ ಆ ಹುಡುಗಿ ತನ್ನಂತೆ ಉಳಿದ ಹುಡುಗಿಯರು ಮೋಸ ಹೋಗದಿರಲಿ ಎಂದು ಪ್ಲೀಸ್ ರಾಘು ನನ್ನ ಬಗ್ಗೆ ಬರೀರಿ ಎಂದು ಕೇಳಿಕೊಂಡಳು. ಆಕೆಯ ಆಕ್ರೋಶ ಎಷ್ಟಿತ್ತು ಎಂದರೆ ನನ್ನ ಹೆಸರು ಮತ್ತು ಅಡ್ರೆಸ್ ಹಾಕಿಯೇ ಬರೀರಿ ಅಂತ ಅಂದುಬಿಟ್ಟಿದ್ದಳು! ಪಲ್ಲವಿಯಂತಹ ಮೋಸ ಹೋದವರು, ಹೋಗುವವರು ಲೆಕ್ಕಕ್ಕೆ ಸಿಗುವುದಿಲ್ಲ ಬಿಡಿ! ಪ್ರಶ್ನೆ ಅದಲ್ಲ. ನನ್ನ ಕಛೇರಿಯಲ್ಲಿ ಕೆಲಸಕ್ಕೆ ತಗೊಳ್ಳೋ ಹುಡುಗರನ್ನ ಒಂದಿಷ್ಟು ಪರೀಕ್ಷೆ ಮಾಡುತ್ತೇವೆ. ಸುದ್ದಿಯನ್ನು ಗ್ರಹಿಸೋ ಶಕ್ತಿ, ಗೌಪ್ಯತೆಯನ್ನ ಕಾಪಾಡುತ್ತಾನಾ? ಮತ್ತು ಈತನನ್ನು ನಂಬಬಹುದಾ? ಹೀಗೆ ಕೆಲವು ಸನ್ನಿವೇಶಗಳಲ್ಲಿ ಪರೀಕ್ಷಿಸಿಯೇ ನಾವು ಅವರಿಗೆ ಜವಾಬ್ದಾರಿ ಕೊಡುತ್ತೇವೆ. ಪ್ರೀತಿಯ ವಿಷಯಕ್ಕೆ ಬಂದರೆ ಎರಡು ಮನಸ್ಸುಗಳು ಒಬ್ಬರನೊಬ್ಬರು ಅರ್ಥಮಾಡ್ಕೋ ತಾರಾ? ಒಬ್ಬರಿಗೆ ಒಬ್ಬರು ತೋರ್ಸೋ ಕೇರ್, ಕನ್ಸರ್ನ್, ಇಬ್ಬರ ಅಭಿರುಚಿ ಇಂತಹವುಗಳನ್ನೆ ಆಧಾರವಾಗಿಟ್ಟುಕೊಂಡು ಪ್ರೀತಿಯ ಮಹಲನ್ನು ಕಟ್ಟೋಕೆ ಪ್ರಾರಂಭ ಮಾಡಿಬಿಡುತ್ತಾರೆ. ಇಲ್ಲಿ ಹುಡುಗನಾಗಲಿ, ಹುಡುಗಿಯಾಗಲಿ ಈತ/ಈಕೆ ನಂಬಿಕೆಗೆ ಅರ್ಹರಾ ಅಂತ ಪ್ರಶ್ನೆ ಮಾಡಿಕೊಳ್ಳುವುದಿಲ್ಲ. ಅದಕ್ಕೆ ಕಾರಣ ಪ್ರೀತಿ ಅಂದ್ರೆ ವ್ಯವಹಾರ ಅಲ್ಲ. ನಾನ್ ಹೀಗ್ ಬದುಕಿದ್ರೆ ಅವಳಿಗಿಷ್ಟವಾಗುತ್ತೆ ಅಂತ ಬದುಕೋ ಹುಡುಗ… ನನ್ ಹುಡ್ಗನಿಗೆ ಯಶಸ್ಸು ಸಿಗಲಿ ಅಂತ ತಲೆ ಸ್ನಾನ ಮಾಡಿ ದೇವರ ಮುಂದೆ ದೀಪ ಹಚ್ಚೋ ಹುಡುಗಿ…. ಅದು ಸುಂದರ ಕ್ಷಣಗಳು. ಇದ್ದಕ್ಕಿದಂತೆ ಈ ಸುಂದರ ಬೆಸುಗೆಯಲ್ಲಿ ಬಿರುಕು ಮೂಡಿ ಬಿಡುತ್ತದೆ. ಇಲ್ಲಿ ಬಿರುಕು ಯಾರಿಂದ ಮತ್ತು ಯಾವ ಕಾರಣಕ್ಕೆ ಮೂಡಿದೆ ಅಂತ ಯೋಚಿಸುವುದಕ್ಕೆ ಸಾಧ್ಯವಾಗುವುದಿಲ್ಲ. ಹುಡುಗಿಯರಾದರೆ ಕೆಲವು ಕಾರಣಗಳನ್ನು ಕೊಟ್ಟು ಹೊರಡುತ್ತಾರೆ. ಹೆಚ್ಚಿನ ಸಲ ಹುಡುಗಿಯರು ಕೊಡುವ ಕಾರಣಗಳು ತೀರಾ ಫನ್ನಿ ಅನಿಸಿಬಿಡುತ್ತದೆ. ಅಪ್ಪಂಗೆ ಗೊತ್ತಾದ್ರೆ… ಅಣ್ಣ ಸರಿ ಇಲ್ಲ…. ಜಾತಿ, ಸಮಾಜ, ಶ್ರೀಮಂತಿಕೆ ಇವೆ ಮುಂತಾದ ಕಾರಣಗಳನ್ನು ಕೊಟ್ಟು ಹೊರಟುಬಿಡುತ್ತಾರೆ. ಕೈ ಕೊಡೋ ವಿಷ್ಯಕ್ಕೆ ಬಂದ್ರೆ ಹುಡುಗರದ್ದು ವಕ್ರ ಬುದ್ದಿ, ಇವರು ಕಾರಣ ಹೇಳುವುದೇ ಇಲ್ಲ. ಕೈಗೆ ಸಿಗದೆ ತಪ್ಪಿಸಿಕೊಳ್ಳ ತೊಡಗುತ್ತಾರೆ. ಸೆಲ್ನ ಬೇರೆಯವರ ಹತ್ತಿರ ಕೊಟ್ಟು ಚಾರ್ಜಿಂಗ್ಗೆ ಕೊಟ್ಟು ಹೋಗಿದ್ದಾನೆ ಅಂತ ರೆಡಿಮೇಡ್ ಉತ್ತರ ಕೊಡಿಸುತ್ತಾರೆ. ಅಂತಹವರ ಪಾಲಿಗೆ ಹುಡುಗಿ ಉಂಡೆದ್ದ ಎಲೆ ಅನಿಸಿಬಿಡುತ್ತಾಳೆ! ಇಂತಹ ಸಂದರ್ಭದಲ್ಲೇ ಅಲ್ವಾ? ಒಬ್ಬರನೊಬ್ಬರು ಮೋಸ ಮಾಡಿದರು ಅಂತ ಅಂದುಕೊಳ್ಳುವುದು. ಹೋಗೋರು ಹೋಗ್ತಾರೆ ಬಿಡು, ಅಂತ ನಾವು ಸಮಾಧಾನ ಮಾಡಬಹುದು. ಎಷ್ಟೇ ಅಂದ್ರು ಮನುಷ್ಯ ಭಾವ ಜೀವಿ. ಮನಸ್ಸು ಬಿಕ್ಕಳಿಸತೊಡಗುತ್ತದೆ. ಭಾವನೆಗೆ ಪೆಟ್ಟು ಬಿದ್ದಾಗ ಬರಿಸೋದು ಕಷ್ಟ. ನಾಳೆ ಕೊಡ್ತೀನಿ ಅಂತ ಸಾಲ ಇಸ್ಕೊಂಡ ಗೆಳೆಯ ವಾಪಾಸ್ ಕೊಡದಿದ್ರೆ ನೋವಾಗಲ್ಲ, ಸಾಯಿಲಿ ಅಂತ ಬಿಟ್ಟು ಬಿಡ್ತೀವಿ. ಕೊಟ್ಟ ದುಡ್ಡನ್ನು ಮರ್ತು ಬಿಡ್ತೀವಿ. ಆದ್ರೆ ನಾಳೆ ಸಿಕ್ತೀನಿ ಅಂತ ಹೇಳಿದ ಗೆಳತಿ/ಗೆಳೆಯ ಮತ್ತೆ ಬಾರದಿದ್ರೆ ಅಷ್ಟು ಸುಲಭವಾಗಿ ಮರಿಯೋಕೆ ಆಗಲ್ಲ. ನಿಮ್ಮನ್ನು ಪ್ರೀತಿಸಿದ ತಪ್ಪಿಗೆ ಅವರು ಕಣ್ಣೀರಿಡೋ ಸ್ಥಿತಿಗೆ ತಂದಿದ್ದು ಸರೀನಾ? ನೀವು ಚೆನ್ನಾಗಿರ್ಲಿ ಅಂತ ದೀಪ ಹಚ್ಚಿದ ಹುಡುಗಿಗೆ, ನಿಮಗೋಸ್ಕರ ಬದುಕು ಕಟ್ಟಿಕೊಳ್ಳೋ ಹುಡುಗನಿಗೆ ಇಂಥದೊಂದು ವಂಚನೆ ಮಾಡಲು ನಿಮ್ಗೆ ಮನಸ್ಸಾದರು ಹೇಗೆ ಬರುತ್ತೆ? ಗೆಳೆಯರೇ, ಎಷ್ಟು ದಿನ ಬದುಕು ತ್ತೇವೋ ಗೊತ್ತಿಲ್ಲ. ಇರುವಷ್ಟು ದಿನ ಸಂತೋಷದಿಂದ ಬದುಕೋಣ, ಎಷ್ಟೋ ಜನ ಪ್ರೀತಿಗಾಗಿ ಹಂಬಲಿಸುತ್ತಾರೆ. ಅಂತಹುದರಲ್ಲಿ ನಿಮ್ಮನ್ನು ತುಂಬಾ ಪ್ರಾಮಾಣಿಕವಾಗಿ ಪ್ರೀತಿಸುವ ಜೀವವೊಂದು ನಿಮಗೆ ಸಿಕ್ಕಿದೆ ಅಂತಾದ್ರೆ ನೀವೇ ಅದೃಷ್ಠವಂತರು! ಅಂತಹವರನ್ನ ನೋಯಿಸಬೇಡಿ. ಅದಕ್ಕಿಂತ ಹೆಚ್ಚಾಗಿ ಅವರನ್ನ ಮಿಸ್ ಮಾಡ್ಕೊಬೇಡಿ. ಅಪಾತ್ರರಿಗೆ ಪ್ರೀತಿ ಕೊಟ್ಟೆ ಅನ್ನೋ ಗಿಲ್ಟ್ ಯಾರಿಗೂ ಬಾರದಿರಲಿ. ಇದನ್ನು ಓದಿ, ಒಂದು ಮುರಿದು ಬಿದ್ದ ಭಾವತಂತಿ ಬೆಸೆದುಕೊಂಡರೆ ನಂಗೆ ಒಂದು ಪತ್ರ ಬರೀರಿ.




