ಶೃಂಗೇರಿ: 2026 ಫೆಬ್ರವರಿ 3 ರಂದು ಶೃಂಗೇರಿ ಜ್ಞಾನ ಭಾರತೀ ಶಾಲಾ ಮುಂಭಾಗದಲ್ಲಿ ಸಂಜೆ 4 ಗಂಟೆಗೆ ಹಿಂದೂ ಸಮಾಜೋತ್ಸವ ನಡೆಸಲು ಭರದ ಸಿದ್ಧತೆ ನಡೆದಿದ್ದು, ಶೃಂಗೇರಿ ಪಟ್ಟಣ ಮತ್ತು ವಿದ್ಯಾರಣ್ಯಪುರ ಗ್ರಾಮ ಪಂಚಾಯಿತಿ ಭಾಗದ ಹಿಂದೂ ಬಾಂಧವರು ಪಾಲ್ಗೊಳ್ಳುವ ಈ ಉತ್ಸವದಲ್ಲಿ ಜಗದ್ಗುರು ಶ್ರೀ ಶ್ರೀ ವಿಧುಶೇಖರ ಭಾರತೀ ಸನ್ನಿಧಾನಮ್ ಗಳವರು ಭಾಗವಹಿಸಿ ಸಾನಿಧ್ಯ ವಹಿಸುತ್ತಿರುವುದು ಕಾರ್ಯಕರ್ತರ ಉತ್ಸಾಹ ಹೆಚ್ಚಿಸಿದೆ. ಕಾರ್ಯಕ್ರಮದಲ್ಲಿ ಶ್ರೀ ಕಜಂಪಾಡಿ ಸುಬ್ರಮಣ್ಯ ಭಟ್ ದಿಕ್ಸೋಚಿ ಭಾಷಣ ಮಾಡಲಿದ್ದಾರೆ. ಹಿಂದೂ ಸಮಾಜೋತ್ಸವ ತಾಲ್ಲೂಕು ಯೋಜನಾ ಸಮಿತಿಯ ಅಧ್ಯಕ್ಷ ಚೋಳರಮನೆ ಪ್ರದೀಪ್ ಮತ್ತಿತರರು ಉಪಸ್ಥಿತರಿರುತ್ತಾರೆ. ನಗರ ಮತ್ತು ಗ್ರಾಮಾಂತರದ ವೃತ್ತಗಳನ್ನು ಅಲಂಕರಿಸಲು ತೀರ್ಮಾನಿಸಿದ್ದು, ಮಲ್ಲಿಕಾರ್ಜುನಬೀದಿ, ಕಲ್ಲುಮೆಟ್ಲು ವೃತ್ತದಿಂದ ಕಾರ್ಯಕ್ರಮ ನಡೆಯುವ ಸ್ಥಳದವರೆಗೆ ಶೋಭಾಯಾತ್ರೆ ನಡೆಸಲು ಪೂರ್ವಭಾವಿ ಸಭೆಯಲ್ಲಿ ತೀರ್ಮಾನಿಸಿರುವುದಾಗಿ ಯೋಜನಾ ಸಮಿತಿಯ ಉಪಾಧ್ಯಕ್ಷ ನಾಗೇಶ್ ಕಾಮತ್ ತಿಳಿಸಿದ್ದಾರೆ.
