
ಬೆಂಗಳೂರು: ‘ವಂದೇ ಮಾತರಂ’ ಗೀತೆಯನ್ನು ಹಾಡುವಂತೆ ಕೇಂದ್ರ ಸರ್ಕಾರ ನೀಡಿರುವ ಆದೇಶವನ್ನು ರಾಜ್ಯ ಸರ್ಕಾರ ಅತ್ತ ಹಾವು ಸಾಯದಂತೆ, ಇತ್ತ ಕೋಲು ಮುರಿಯದಂತೆ ಜಾರಿಗೊಳಿಸಲು ಮುಂದಾಗಿದೆ. ಇದರ ಅನ್ವಯ ಸರ್ಕಾರಿ ಕಾರ್ಯಕ್ರಮಗಳಲ್ಲಿ ‘ವಂದೇ ಮಾತರಂ’ ಗೀತೆಯ ಮೊದಲ ಎರಡು ಚರಣಗಳನ್ನು ಮಾತ್ರ ಹಾಡಲು ಸಂಪುಟದಲ್ಲಿ ತೀರ್ಮಾನಿಸಲಾಗಿದೆ. ದೇಶದ ಜನರಲ್ಲಿ ರಾಷ್ಟ್ರೀಯತೆ, ಏಕತೆ ಮತ್ತು ದೇಶಭಕ್ತಿಯ ಭಾವನೆ ಮೂಡಿಸುವಲ್ಲಿ ಮಹತ್ವದ ಪಾತ್ರ ವಹಿಸಿರುವ ‘ವಂದೇ ಮಾತರಂ’ ಗೀತೆಯ ಗಾಯನಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಮಾರ್ಗಸೂಚಿಗಳನ್ನು ಹೊರಡಿಸಿದೆ. ವಿವಿಧ ಸರ್ಕಾರಿ ಕಚೇರಿಗಳು, ಸರ್ಕಾರಿ ಹಾಗೂ ಅನುದಾನಿತ ಶಿಕ್ಷಣ ಸಂಸ್ಥೆಗಳು ಮತ್ತು ರಾಜ್ಯದ ಸರ್ಕಾರಿ ಕಾರ್ಯಕ್ರಮಗಳು, ಸಮಾರಂಭಗಳು ಹಾಗೂ ಸಭೆಗಳಲ್ಲಿ ‘ವಂದೇ ಮಾತರಂ’ ಗೀತೆಯ ವಾದನ ಹಾಗೂ ಸಾಮೂಹಿಕ ಗಾಯನಕ್ಕೆ ಅವಕಾಶ ಕಲ್ಪಿಸಲಾಗಿದೆ. ಮಾನ್ಯ ರಾಷ್ಟ್ರಪತಿಗಳು, ಉಪರಾಷ್ಟ್ರಪತಿಗಳು, ಪ್ರಧಾನಮಂತ್ರಿಗಳು ಹಾಗೂ ರಾಜ್ಯಪಾಲರು ಉಪಸ್ಥಿತರಿರುವ ಕಾರ್ಯಕ್ರಮಗಳಲ್ಲಿ ಮಾತ್ರ ಸಂಪೂರ್ಣ ‘ವಂದೇ ಮಾತರಂ’ ಗೀತೆಯನ್ನು ಹಾಡಲು ಅವಕಾಶ ನೀಡಲಾಗಿದ್ದು, ಇವರನ್ನು ಹೊರತುಪಡಿಸಿ ನಡೆಯುವ ಉಳಿದ ಸರ್ಕಾರಿ ಕಾರ್ಯಕ್ರಮಗಳಲ್ಲಿ ಮೊದಲ ಎರಡು ಚರಣಗಳನ್ನು ಮಾತ್ರ ಹಾಡಬೇಕು ಎಂದು ಆದೇಶಿಸಲಾಗಿದೆ. ಈ ಸಂಬಂಧ ರಾಜ್ಯ ಸರ್ಕಾರವು 2026ರ ಸೆಪ್ಟೆಂಬರ್ 8ರಂದು ಅಧಿಕೃತ ಆದೇಶ ಹೊರಡಿಸಿದ್ದು, ಸರ್ಕಾರಿ ಕಾರ್ಯಕ್ರಮಗಳಲ್ಲಿ ‘ವಂದೇ ಮಾತರಂ’ ಗಾಯನ ಮತ್ತು ವಾದನವನ್ನು ನಿಯಮಿತವಾಗಿ ನಿರ್ವಹಿಸುವಂತೆ ಸೂಚಿಸಿದೆ.




