
ಬೆಂಗಳೂರು: ರಾಜ್ಯದ ಬಿಪಿಎಲ್ ಪಡಿತರ ಚೀಟಿ ಹೊಂದಿರುವ ಕುಟುಂಬಗಳಿಗೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಮತ್ತೊಂದು ಸಿಹಿ ಸುದ್ದಿ ನೀಡಿದ್ದು, ಅನ್ನ ಭಾಗ್ಯ ಯೋಜನೆಯಡಿ ಈಗಾಗಲೇ ಪ್ರತಿ ವ್ಯಕ್ತಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಒಟ್ಟು 10 ಕೆಜಿ ಅಕ್ಕಿ ವಿತರಣೆ ಮಾಡುತ್ತಿರುವ ನಡುವೆ ಇನ್ನುಮುಂದೆ ಅಕ್ಕಿಯ ಜೊತೆಗೆ 2 ಕೆಜಿ ರಾಗಿ ಅಥವಾ ಜೋಳವೂ ವಿತರಿಸಲು ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಹಳೇ ಮೈಸೂರು ಭಾಗದ ಫಲಾನುಭವಿಗಳಿಗೆ ರಾಗಿ ಹಾಗೂ ಹೈದರಾಬಾದ್ ಕರ್ನಾಟಕ ಮತ್ತು ಮುಂಬೈ ಕರ್ನಾಟಕ ಭಾಗದ ಪಡಿತರದಾರರಿಗೆ ಜೋಳ ನೀಡಲು ಯೋಜನೆ ರೂಪಿಸಲಾಗಿದ್ದು, ಮೇ ತಿಂಗಳಿನಿಂದಲೇ ಈ ಯೋಜನೆ ಜಾರಿಗೆ ಬರಲಿದೆ ಎಂದು ತಿಳಿದುಬಂದಿದೆ. ರಾಜ್ಯದಲ್ಲಿ ಅಪಾರ ಪ್ರಮಾಣದ ರಾಗಿ ಸಂಗ್ರಹಿಸಲು ಸರ್ಕಾರ ಮುಂದಾಗಿದ್ದು, ಮೇ 15ರವರೆಗೆ ನೋಂದಾಯಿತ ರೈತರಿಂದ ರಾಗಿ ಖರೀದಿಗೆ ಅವಕಾಶ ಕಲ್ಪಿಸಲಾಗಿದೆ. ಸುಮಾರು 6 ಲಕ್ಷ ಮೆಟ್ರಿಕ್ ಟನ್ಗೂ ಅಧಿಕ ರಾಗಿ ಸಂಗ್ರಹಿಸುವ ಗುರಿ ಹೊಂದಿರುವ ಸರ್ಕಾರ, ಹತ್ತು ತಿಂಗಳ ವಿತರಣೆಗೆ ಸಾಕಾಗುವಷ್ಟು ರಾಗಿ ಮತ್ತು ಜೋಳವನ್ನು ಖರೀದಿಸಿ ದಾಸ್ತಾನು ಮಾಡಲು ಸಿದ್ಧತೆ ನಡೆಸಿದೆ. ಈ ಯೋಜನೆಗೆ ಕೇಂದ್ರ ಸರ್ಕಾರದ ಅನುಮೋದನೆ ಪಡೆಯುವ ಪ್ರಕ್ರಿಯೆಯೂ ನಡೆಯುತ್ತಿದ್ದು, ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಪ್ರತಿಮಾಸ 57 ಸಾವಿರ ಮೆಟ್ರಿಕ್ ಟನ್ ರಾಗಿ ಹಾಗೂ 8ರಿಂದ 9 ಸಾವಿರ ಮೆಟ್ರಿಕ್ ಟನ್ ಜೋಳ ಅಗತ್ಯವಿರಬಹುದು ಎಂದು ಆಹಾರ ಇಲಾಖೆ ಅಂದಾಜಿಸಿದೆ. ಬಡಜನರ ಪೌಷ್ಟಿಕತೆ ಮತ್ತು ಶ್ರೇಯೋಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಈ ಕ್ರಮ ಕೈಗೊಂಡಿದ್ದು, ಅರ್ಹ ಫಲಾನುಭವಿಗಳಿಗೆ ಸೌಲಭ್ಯ ತಲುಪಿಸಲು ಕ್ರಮಗಳನ್ನು ಬಿಗಿಗೊಳಿಸಲಾಗಿದೆ. ಇದೇ ವೇಳೆ ಅಕ್ರಮ ಬಿಪಿಎಲ್ ಕಾರ್ಡ್ಗಳ ವಿರುದ್ಧ ಪರಿಶೀಲನೆ ಮುಂದುವರಿದಿದ್ದು, ರಾಜ್ಯದಾದ್ಯಂತ ಸಲ್ಲಿಕೆಯಾಗಿರುವ 3,22,468 ಹೊಸ ಬಿಪಿಎಲ್ ಅರ್ಜಿಗಳು ಇನ್ನೂ ಬಾಕಿ ಉಳಿದಿವೆ. ಬೆಳಗಾವಿ, ಕಲಬುರಗಿ, ವಿಜಯಪುರ, ರಾಯಚೂರು, ಕೊಪ್ಪಳ ಸೇರಿದಂತೆ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳು ಹಾಗೂ ಬೆಂಗಳೂರಿನಲ್ಲಿ ಹೆಚ್ಚು ಅರ್ಜಿಗಳು ಬಾಕಿ ಉಳಿದಿವೆ ಎಂದು ತಿಳಿದುಬಂದಿದೆ.



