
ಚಿಕ್ಕಮಗಳೂರು: ಕಾಫಿನಾಡು ಮಲೆನಾಡು ಭಾಗದಲ್ಲಿ ನಿನ್ನೆ ಮಧ್ಯಾಹ್ನದಿಂದ ಭಾರೀ ಗಾಳಿ-ಮಳೆ ಅಬ್ಬರ ಮುಂದುವರಿದಿದ್ದು, ಮುಂಜಾಗ್ರತಾ ಕ್ರಮವಾಗಿ ಮೂಡಿಗೆರೆ ತಾಲೂಕಿನ ಎಲ್ಲಾ ಅಂಗನವಾಡಿ ಕೇಂದ್ರಗಳು ಹಾಗೂ ಪ್ರಾಥಮಿಕ ಶಾಲೆಗಳಿಗೆ ಇಂದು ಒಂದು ದಿನ ರಜೆ ಘೋಷಿಸಲಾಗಿದೆ. ಈ ಕುರಿತು ಮೂಡಿಗೆರೆ ತಹಶೀಲ್ದಾರ್ ಅಶ್ವಿನಿ ಆದೇಶ ಹೊರಡಿಸಿದ್ದಾರೆ.
ಕಳೆದ ಎರಡು-ಮೂರು ದಿನಗಳಿಂದ ಸಾಧಾರಣವಾಗಿದ್ದ ಮಳೆ ಕಳೆದ ರಾತ್ರಿ ಮತ್ತಷ್ಟು ಚುರುಕುಗೊಂಡಿದ್ದು, ರಣಗಾಳಿಯೊಂದಿಗೆ ಸುರಿಯುತ್ತಿರುವ ಭಾರೀ ಮಳೆಯಿಂದ ಮಲೆನಾಡಿನಾದ್ಯಂತ ಜನಜೀವನ ಅಸ್ತವ್ಯಸ್ತವಾಗಿದೆ. ಹಲವೆಡೆ ಬೃಹತ್ ಮರಗಳು ರಸ್ತೆ ಮೇಲೆ ಉರುಳಿ ಬಿದ್ದ ಪರಿಣಾಮ ಹತ್ತಾರು ಗ್ರಾಮಗಳ ರಸ್ತೆ ಸಂಪರ್ಕ ಕಡಿತಗೊಂಡಿದೆ. ಮೂಡಿಗೆರೆ ತಾಲೂಕಿನ ಮತ್ತಿಕಟ್ಟೆ ಗ್ರಾಮದಲ್ಲಿ ಮರ ಬಿದ್ದ ಪರಿಣಾಮ ರಸ್ತೆ ಸಂಚಾರ ಸ್ಥಗಿತಗೊಂಡಿದೆ.
ಇದೇ ವೇಳೆ ವಿದ್ಯುತ್ ತಂತಿಗಳ ಮೇಲೆ ಮರಗಳು ಬಿದ್ದ ಪರಿಣಾಮ ಮಲೆನಾಡಿನ ಹಲವು ಗ್ರಾಮಗಳಲ್ಲಿ ವಿದ್ಯುತ್ ಸಂಪರ್ಕ ಸಂಪೂರ್ಣ ಸ್ಥಗಿತಗೊಂಡಿದ್ದು, ಜನರು ಕತ್ತಲಲ್ಲೇ ಕಾಲ ಕಳೆಯುವಂತಾಗಿದೆ. ಭಾರೀ ಗಾಳಿ-ಮಳೆಯಿಂದ ಮನೆಗಳಿಗೂ ಹಾನಿಯಾಗಿದ್ದು, ಮೂಡಿಗೆರೆ ತಾಲೂಕಿನ ಬಡವನದಿಣ್ಣೆ ಗ್ರಾಮದಲ್ಲಿ ಪೂರ್ಣೇಶ್ ಎಂಬುವರ ಮನೆ ಮೇಲೆ ಬೃಹತ್ ಮರ ಬಿದ್ದು ಮನೆ ಸಂಪೂರ್ಣ ಜಖಂಗೊಂಡಿದೆ. ಅದೃಷ್ಟವಶಾತ್ ಯಾವುದೇ ಜೀವಹಾನಿ ಸಂಭವಿಸಿಲ್ಲ.
ನಿರಂತರವಾಗಿ ಸುರಿಯುತ್ತಿರುವ ಮಳೆ ಹಾಗೂ ಬೀಸುತ್ತಿರುವ ರಣಗಾಳಿಯಿಂದ ಮಲೆನಾಡಿನ ಜನರು ಆತಂಕದಲ್ಲಿದ್ದು, ಪರಿಸ್ಥಿತಿಯನ್ನು ಅಧಿಕಾರಿಗಳು ನಿರಂತರವಾಗಿ ಗಮನಿಸುತ್ತಿದ್ದಾರೆ. ಮುನ್ನೆಚ್ಚರಿಕಾ ಕ್ರಮವಾಗಿ ಜನರು ಅನಗತ್ಯವಾಗಿ ಹೊರಗಡೆ ಸಂಚರಿಸದಂತೆ ಹಾಗೂ ಸುರಕ್ಷತಾ ಕ್ರಮಗಳನ್ನು ಪಾಲಿಸುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.




