
ಚಿಕ್ಕಮಗಳೂರು: ಮಲೆನಾಡಿನ ಕಾಡಂಚಿನ ಪ್ರದೇಶಗಳಲ್ಲಿ ಮತ್ತೆ ಮಂಗನ ಕಾಯಿಲೆ (KFD) ಆತಂಕ ಎದುರಾಗಿದ್ದು, ಜಿಲ್ಲೆಯಲ್ಲಿ 2026ನೇ ಸಾಲಿನಲ್ಲಿ ಈವರೆಗೆ 72 ಮಂದಿಗೆ ಸೋಂಕು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು, ರೈತರು, ಕಾಫಿ ತೋಟದ ಕಾರ್ಮಿಕರು ಹಾಗೂ ಕಾಡಂಚಿನ ಗ್ರಾಮಸ್ಥರು ಎಚ್ಚರಿಕೆ ವಹಿಸುವಂತೆ ಆರೋಗ್ಯ ಇಲಾಖೆ ಸೂಚನೆ ನೀಡಿದೆ. ಜಿಲ್ಲಾ ಆರೋಗ್ಯ ಇಲಾಖೆಯ ಅಂಕಿಅಂಶಗಳ ಪ್ರಕಾರ, ಒಟ್ಟು 3,098 ಮಂದಿಯನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, ಈ ಪೈಕಿ 72 ಮಂದಿಗೆ ಸೋಂಕು ದೃಢಪಟ್ಟಿದೆ. ಸೋಂಕಿತರಲ್ಲಿ 64 ಮಂದಿ ಕೊಪ್ಪ ತಾಲೂಕಿನಲ್ಲಿ, 6 ಮಂದಿ ಎನ್.ಆರ್.ಪುರದಲ್ಲಿ ಹಾಗೂ ಇಬ್ಬರು ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ಇನ್ನು ಈ ವರ್ಷ ಜಿಲ್ಲೆಯಲ್ಲಿ ಒಟ್ಟು 9 ಮಂಗಗಳು ಸಾವನ್ನಪ್ಪಿದ್ದು, ಪರೀಕ್ಷೆಗೆ ಕಳುಹಿಸಲಾದ 8 ಮಂಗಗಳ ಮಾದರಿಗಳಲ್ಲಿ ಕೆಎಫ್ಡಿ ವೈರಸ್ ಪತ್ತೆಯಾಗಿಲ್ಲ. ಆದರೆ ಕಾಡು ಹಾಗೂ ಕಾಡಂಚಿನ ಪ್ರದೇಶಗಳಿಂದ ಸಂಗ್ರಹಿಸಲಾದ 613 ಉಣ್ಣೆಗಳ ಮಾದರಿಗಳಲ್ಲಿ ಎರಡು ಸ್ಥಳಗಳ ಮಾದರಿಗಳಿಗೆ ಪಾಸಿಟಿವ್ ವರದಿ ಬಂದಿರುವುದು ಆತಂಕಕ್ಕೆ ಕಾರಣವಾಗಿದೆ. ಚಿಕ್ಕಮಗಳೂರು, ಎನ್.ಆರ್.ಪುರ, ಕೊಪ್ಪ ಹಾಗೂ ಶೃಂಗೇರಿ ತಾಲೂಕುಗಳಲ್ಲಿ ಸೋಂಕಿನ ಅಪಾಯ ಇರುವುದರಿಂದ ಆರೋಗ್ಯ ಇಲಾಖೆ ಜ್ವರ ಸಮೀಕ್ಷೆ, ರಕ್ತದ ಮಾದರಿ ಸಂಗ್ರಹ ಹಾಗೂ ಉಣ್ಣೆಗಳ ಪರೀಕ್ಷೆಯನ್ನು ಕೈಗೊಂಡಿದೆ. ಸಾಮಾನ್ಯವಾಗಿ ನವೆಂಬರ್ನಿಂದ ಜೂನ್ವರೆಗೆ ಮಂಗನ ಕಾಯಿಲೆ ಹರಡುವ ಅಪಾಯ ಹೆಚ್ಚಿರುವುದರಿಂದ ಕಾಡಿಗೆ ಹಾಗೂ ಕಾಫಿ ತೋಟಗಳಿಗೆ ತೆರಳುವವರು ಉಣ್ಣೆ ನಿವಾರಕ ಬಳಸುವುದು, ಮೈತುಂಬಾ ಮುಚ್ಚುವ ಬಟ್ಟೆ ಧರಿಸುವುದು ಹಾಗೂ ಸತ್ತ ಮಂಗಗಳ ಸಮೀಪ ಹೋಗದಿರುವುದು ಸೇರಿದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸುವಂತೆ ಸೂಚಿಸಲಾಗಿದೆ. ಜ್ವರ, ತಲೆನೋವು, ಮೈಕೈ ನೋವು ಹಾಗೂ ಸುಸ್ತಿನಂತಹ ಲಕ್ಷಣಗಳು ಕಂಡುಬಂದರೆ ತಕ್ಷಣ ಸಮೀಪದ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ತಪಾಸಣೆ ಮಾಡಿಸಿಕೊಳ್ಳುವಂತೆ ಆರೋಗ್ಯ ಇಲಾಖೆ ಮನವಿ ಮಾಡಿದೆ. ಜಿಲ್ಲೆಯಲ್ಲಿ ಮಂಗನ ಕಾಯಿಲೆ ಹರಡುವುದನ್ನು ತಡೆಯಲು ಆರೋಗ್ಯ, ಅರಣ್ಯ ಹಾಗೂ ಪಶುಸಂಗೋಪನಾ ಇಲಾಖೆಗಳು ನಿರಂತರ ನಿಗಾ ವಹಿಸಿವೆ.





