
ಕಾರ್ಕಳ: ಮಹಾಭಾರತ ಕೇವಲ ಯುದ್ಧದ ಕಥೆಯಲ್ಲ, ಅದು ಲೋಕಹಿತ, ಧರ್ಮ ಮತ್ತು ಶಾಂತಿಯ ಮಹತ್ವವನ್ನು ಸಾರುವ ಮಹಾಗ್ರಂಥವಾಗಿದೆ. ಲೋಕಹಿತವನ್ನು ಬಯಸುವ ಕಾರ್ಯಗಳೆಲ್ಲವೂ ಧರ್ಮವೇ ಆಗಿದೆ ಎಂದು ವಿದ್ವಾಂಸರಾದ ಡಾ. ವಿನಾಯಕ ಭಟ್ ಗಾಳಿಮನೆ ತಿಳಿಸಿದರು. ಕನ್ನಡ ಸಂಘ ಕಾಂತಾವರ, ಅಲ್ಲಮಪ್ರಭು ಪೀಠ ಕಾಂತಾವರ ಹಾಗೂ ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಕಾರ್ಕಳ ತಾಲೂಕು ಘಟಕದ ಸಹಭಾಗಿತ್ವದಲ್ಲಿ ವರ್ಷಪೂರ್ತಿ ನಡೆಯುತ್ತಿರುವ ‘ಮಹಾಭಾರತ ಭಾವದೀಪ’ ಉಪನ್ಯಾಸ ಮಾಲೆಯ ಏಕಾದಶ ಸೋಪಾನದಲ್ಲಿ, ನವೆಂಬರ್ 14ರಂದು ಕಾರ್ಕಳದ ಪ್ರಕಾಶ್ ಹೋಟೆಲ್ನ ‘ಸಂಭ್ರಮ’ ಸಭಾಂಗಣದಲ್ಲಿ ನಡೆದ ‘ಯುದ್ಧ – ಸ್ತ್ರೀ – ಶಾಂತಿ ಪರ್ವಗಳು’ ಎಂಬ ವಿಷಯದ ಕುರಿತು ಅವರು ಉಪನ್ಯಾಸ ನೀಡಿದರು.ಮಹಾಭಾರತದಲ್ಲಿ ಯುದ್ಧದ ಬಳಿಕವೇ ಹಸ್ತಿನಾಪುರದಲ್ಲಿ ಶಾಂತಿ ನೆಲೆಗೊಳ್ಳಲು ಆರಂಭವಾಗುತ್ತದೆ. ಕೃಷ್ಣನು ರಾಜಧರ್ಮ, ಆಪದ್ಧರ್ಮ ಮತ್ತು ಮೋಕ್ಷಧರ್ಮದ ಮಹತ್ವವನ್ನು ತಿಳಿಸಿದ್ದಾನೆ. ಯುದ್ಧ ನಿಂತ ತಕ್ಷಣವೇ ಶಾಂತಿ ದೊರೆಯುವುದಿಲ್ಲ. ಜಯ-ಅಪಜಯಗಳನ್ನು ಮೀರಿ, ಷಡ್ವೈರಿಗಳನ್ನು ಗೆದ್ದು ಮನಸ್ಸನ್ನು ಶಾಂತಗೊಳಿಸಿ ಪಾರಮಾರ್ಥಿಕ ಸುಖವನ್ನು ಅನುಭವಿಸುವುದರಲ್ಲಿಯೇ ನಿಜವಾದ ಶಾಂತಿ ಅಡಗಿದೆ. ದೇವರ ಕೃಪೆಗೆ ಪಾತ್ರರಾದರೆ ನಾವು ಕೇಳದಿದ್ದರೂ ಆತನೇ ನಮ್ಮ ರಕ್ಷಣೆಗೆ ನಿಲ್ಲುತ್ತಾನೆ ಎಂಬ ಸಂದೇಶವನ್ನು ಮಹಾಭಾರತ ನೀಡುತ್ತದೆ ಎಂದು ಅವರು ವಿವರಿಸಿದರು.ಇದೇ ಸಂದರ್ಭದಲ್ಲಿ ಕಾಂತಾವರ ಕನ್ನಡ ಸಂಘದ ‘ಮಂಜನ ಬೈಲ್ ರಂಗಸನ್ಮಾನ್’ ದತ್ತಿನಿಧಿ ಪ್ರಶಸ್ತಿಯನ್ನು ಕರಾವಳಿ ರಂಗಾಯಣದ ನಿರ್ದೇಶಕ ಬಿ.ಆರ್. ವೆಂಕಟ್ರಮಣ ಐತಾಳ್ ಅವರಿಗೆ ಪ್ರದಾನ ಮಾಡಲಾಯಿತು. ಹಾರ, ಶಾಲು, ತಾಮ್ರಪತ್ರ, ಸ್ಮರಣಿಕೆ ಹಾಗೂ 10 ಸಾವಿರ ರೂಪಾಯಿ ನಗದಿನೊಂದಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.ಇತ್ತೀಚೆಗೆ ನಿಧನರಾದ ಭುವನೇಂದ್ರ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಹಾಗೂ ಸಾಹಿತ್ಯ-ಸಾಂಸ್ಕೃತಿಕ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದ ಡಾ. ಬಿ. ಪದ್ಮನಾಭ ಗೌಡ ಅವರಿಗೆ ನಿತ್ಯಾನಂದ ಪೈ ನುಡಿನಮನ ಸಲ್ಲಿಸಿದರು. ಬಳಿಕ ಮೌನ ಪ್ರಾರ್ಥನೆಯ ಮೂಲಕ ಶ್ರದ್ಧಾಂಜಲಿ ಅರ್ಪಿಸಲಾಯಿತು. ಕಾರ್ಯಕ್ರಮದಲ್ಲಿ ಡಾ. ನಾ. ಮೊಗಸಾಲೆ, ನಿತ್ಯಾನಂದ ಪೈ, ಮಿತ್ರಪ್ರಭಾ ಹೆಗ್ಡೆ ಹಾಗೂ ಏರ್ ವೈಸ್ ಮಾರ್ಷಲ್ ರಮೇಶ್ ಕಾರ್ಣಿಕ್ ಉಪಸ್ಥಿತರಿದ್ದರು. ಶಾರ್ವರಿ ಶ್ಯಾನುಭಾಗ್ ಪ್ರಾರ್ಥಿಸಿದರು. ಸುಲೋಚನಾ ಬಿ.ವಿ. ಕಾರ್ಯಕ್ರಮ ನಿರ್ವಹಿಸಿದರು. ಸದಾನಂದ ನಾರಾವಿ ಸ್ವಾಗತಿಸಿ, ಜಗದೀಶ್ ಗೋಖಲೆ ವಂದಿಸಿದರು.




