ಗೂಗಲ್ ಪೇ, ಫೋನ್ಪೇ, ಪೇಟಿಎಂ ಸೇರಿದಂತೆ ಯುಪಿಐ ಮೂಲಕ ಹಣ ಪಾವತಿಸುವವರಿಗೆ ಸಿಹಿಸುದ್ದಿಯೊಂದು ಹೊರಬಿದ್ದಿದೆ. ಆಯ್ದ ಯುಪಿಐ ವಹಿವಾಟುಗಳ ಮೇಲೆ ವ್ಯಾಪಾರಿ ರಿಯಾಯಿತಿ ದರ ಅಂದರೆ ಎಂಡಿಆರ್ ಶುಲ್ಕ ವಿಧಿಸುವ ಪ್ರಸ್ತಾವನೆಯ ಜಾರಿ ಮತ್ತಷ್ಟು ವಿಳಂಬವಾಗುವ ಸಾಧ್ಯತೆಯಿದೆ. 2027ರ ಮೊದಲಾರ್ಧದಲ್ಲಿ ಐದು ರಾಜ್ಯಗಳಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗಳ ಬಳಿಕವಷ್ಟೇ ಈ ಶುಲ್ಕ ಜಾರಿಗೆ ಬರಬಹುದು ಎಂದು ವರದಿಯಾಗಿದೆ. ವ್ಯಾಪಾರಿಗಳು ಹಾಗೂ ವ್ಯಾಪಾರ ಸಂಘಟನೆಗಳಿಂದ ವ್ಯಕ್ತವಾಗುತ್ತಿರುವ ವಿರೋಧದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಈ ನಿರ್ಧಾರ ಕೈಗೊಳ್ಳಲು ಮುಂದಾಗಿಲ್ಲ ಎನ್ನಲಾಗಿದೆ. ಪ್ರಸ್ತಾವನೆಯ ಪ್ರಕಾರ, ಆಯ್ದ ವ್ಯಾಪಾರಿ ವಹಿವಾಟುಗಳಲ್ಲಿ 2 ಸಾವಿರ ರೂಪಾಯಿಗಿಂತ ಹೆಚ್ಚಿನ ಪಾವತಿಗಳಿಗೆ ಶೇ.0.4ರಷ್ಟು ಎಂಡಿಆರ್ ಶುಲ್ಕ ವಿಧಿಸಲು ಉದ್ದೇಶಿಸಲಾಗಿದೆ. ಉದಾಹರಣೆಗೆ, 5 ಸಾವಿರ ರೂಪಾಯಿ ಪಾವತಿಗೆ ವ್ಯಾಪಾರಿಗೆ 20 ರೂಪಾಯಿ ಶುಲ್ಕ ಅನ್ವಯವಾಗಬಹುದು. ಆದರೆ ಈ ಶುಲ್ಕವನ್ನು ಗ್ರಾಹಕರು ನೇರವಾಗಿ ಪಾವತಿಸಬೇಕಾಗಿಲ್ಲ. ವ್ಯಕ್ತಿಯಿಂದ ವ್ಯಕ್ತಿಗೆ ಮಾಡುವ ಯುಪಿಐ ಹಣ ವರ್ಗಾವಣೆಗಳು ಎಂದಿನಂತೆ ಉಚಿತವಾಗಿರಲಿದ್ದು, 2 ಸಾವಿರ ರೂಪಾಯಿವರೆಗಿನ ಅಂಗಡಿ ಪಾವತಿಗಳಿಗೂ ಯಾವುದೇ ಶುಲ್ಕ ಇರುವುದಿಲ್ಲ. ಜೊತೆಗೆ ತಿಂಗಳಿಗೆ ಒಂದು ಲಕ್ಷ ರೂಪಾಯಿವರೆಗೆ ಯುಪಿಐ ಮೂಲಕ ಹಣ ಸ್ವೀಕರಿಸುವ ಅರ್ಹ ಸಣ್ಣ ವ್ಯಾಪಾರಿಗಳಿಗೂ ವಿನಾಯಿತಿ ನೀಡಲಾಗಿದೆ. ಸರ್ಕಾರದ ಅಂದಾಜಿನ ಪ್ರಕಾರ, ಸುಮಾರು ಶೇ.96ರಷ್ಟು ವ್ಯಾಪಾರಿ ಯುಪಿಐ ವಹಿವಾಟುಗಳು ಈ ಶುಲ್ಕದಿಂದ ಹೊರತಾಗಿರಲಿವೆ. ಈ ಹಿಂದೆ 2026ರ ಅಕ್ಟೋಬರ್ 15ರಿಂದ ಶುಲ್ಕ ಜಾರಿಗೆ ತರಲು ಉದ್ದೇಶಿಸಲಾಗಿತ್ತು. ಆದರೆ ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಮುಂದೂಡಲಾಗಿತ್ತು. ಇದೀಗ ವ್ಯಾಪಾರಿಗಳ ವಿರೋಧ ಹಾಗೂ ಮುಂಬರುವ ವಿಧಾನಸಭಾ ಚುನಾವಣೆಗಳ ಹಿನ್ನೆಲೆಯಲ್ಲಿ ಜಾರಿ ಮತ್ತಷ್ಟು ವಿಳಂಬವಾಗುವ ಸಾಧ್ಯತೆ ಇದೆ. ಈ ಕುರಿತು ಕೇಂದ್ರ ಸರ್ಕಾರ, ಭಾರತೀಯ ರಿಸರ್ವ್ ಬ್ಯಾಂಕ್ ಹಾಗೂ ರಾಷ್ಟ್ರೀಯ ಪಾವತಿ ನಿಗಮದ ನಡುವೆ ಅಂತಿಮ ಒಮ್ಮತ ಮೂಡಬೇಕಿದೆ. ಇನ್ನು ಸಣ್ಣ ವ್ಯಾಪಾರಿಗಳಲ್ಲಿ ಡಿಜಿಟಲ್ ಪಾವತಿಯನ್ನು ಉತ್ತೇಜಿಸಲು ಎನ್ಪಿಸಿಐ ಯುಪಿಐ ವ್ಯಾಪಾರ್ ಸಕ್ಷಮ್ ಯೋಜನೆಯನ್ನೂ ಪರಿಚಯಿಸಿದೆ. ಒಟ್ಟಿನಲ್ಲಿ, ಸದ್ಯಕ್ಕೆ ಸಾಮಾನ್ಯ ಯುಪಿಐ ಬಳಕೆದಾರರು ಯಾವುದೇ ಹೆಚ್ಚುವರಿ ಶುಲ್ಕ ಪಾವತಿಸುವ ಆತಂಕ ಪಡುವ ಅಗತ್ಯವಿಲ್ಲ. ಆಯ್ದ ದೊಡ್ಡ ಮೊತ್ತದ ವ್ಯಾಪಾರಿ ವಹಿವಾಟುಗಳಿಗೆ ಎಂಡಿಆರ್ ಶುಲ್ಕ ಯಾವಾಗಿನಿಂದ ಜಾರಿಗೆ ಬರಲಿದೆ ಎಂಬುದರ ಬಗ್ಗೆ ಅಧಿಕೃತ ನಿರ್ಧಾರ ಹೊರಬೀಳಬೇಕಿದೆ.
