ಚಿಕ್ಕಮಗಳೂರು: ತಾಲೂಕಿನ ಲಕ್ಷ್ಮಿಪುರ ಗ್ರಾಮದಲ್ಲಿ ಆಟವಾಡುತ್ತಿದ್ದ 11 ತಿಂಗಳ ಮಗು ಆಕಸ್ಮಿಕವಾಗಿ ಮನೆಯ ಬಾಗಿಲನ್ನು ಒಳಭಾಗದಿಂದ ಲಾಕ್ ಮಾಡಿಕೊಂಡ ಘಟನೆ ನಡೆದಿದೆ. ಮಗುವನ್ನು ಮನೆಯೊಳಗೆ ಬಿಟ್ಟು ತಾಯಿ ಹೊರಭಾಗದಲ್ಲಿ ಕೆಲಸ ಮಾಡುತ್ತಿದ್ದ ವೇಳೆ, ಆಟವಾಡುತ್ತಿದ್ದ ಮಗು ಏಕಾಏಕಿ ಬಾಗಿಲು ಹಾಕಿಕೊಂಡಿದೆ. ಇದರಿಂದ ಮನೆಯೊಳಗೆ ಮಗು ಸಿಲುಕಿಕೊಂಡಿದ್ದು, ಕಿಟಕಿಯ ಬಳಿ ಮಗು ಕಾಣಿಸಿಕೊಂಡಾಗ ತಾಯಿ ಆತಂಕಕ್ಕೊಳಗಾಗಿದ್ದಾರೆ. ತಕ್ಷಣ ಅಗ್ನಿಶಾಮಕ ದಳದ ಸಿಬ್ಬಂದಿಗೆ ಮಾಹಿತಿ ನೀಡಲಾಗಿದ್ದು, ಸ್ಥಳಕ್ಕೆ ಆಗಮಿಸಿದ ಸಿಬ್ಬಂದಿ ಹೈಡ್ರಾಲಿಕ್ ಕಟರ್ ಬಳಸಿ ಕಿಟಕಿಯನ್ನು ಕತ್ತರಿಸಿ ಮನೆಯೊಳಗೆ ಪ್ರವೇಶಿಸಿದ್ದಾರೆ. ಬಳಿಕ ಮನೆಯೊಳಗೆ ಅಳುತ್ತಿದ್ದ 11 ತಿಂಗಳ ಮಗುವನ್ನು ಸುರಕ್ಷಿತವಾಗಿ ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅದೃಷ್ಟವಶಾತ್ ಯಾವುದೇ ಅಪಾಯ ಸಂಭವಿಸದೆ ಮಗು ಸುರಕ್ಷಿತವಾಗಿ ಪಾರಾಗಿದೆ.
