
ಚಿಕ್ಕಮಗಳೂರು: ವಿಧಾನಸೌಧದಲ್ಲೇ ಕಡೂರು ರೈತರಿಗೆ ಕೋಟ್ಯಂತರ ವಂಚನೆ ಆರೋಪ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಸುಮಾರು 80ಕ್ಕೂ ಹೆಚ್ಚು ರೈತರಿಗೆ ಸರ್ಕಾರದ ಕೃಷಿ ಹಾಗೂ ಪ್ರವಾಸೋದ್ಯಮ ಇಲಾಖೆಗಳ ಸಬ್ಸಿಡಿ ಯೋಜನೆಗಳ ಹೆಸರಿನಲ್ಲಿ ಸುಮಾರು ₹1,38,94,400 ರೂಪಾಯಿ ವಂಚನೆ ನಡೆದಿರುವ ಪ್ರಕರಣ ಬೆಳಕಿಗೆ ಬಂದಿದೆ. ಬೆಂಗಳೂರಿನ ವಿಧಾನಸೌಧದಲ್ಲೇ ಗಂಗಾಧರ ಗೌಡ ಎಂಬ ವ್ಯಕ್ತಿ ರೈತರನ್ನು ಸಂಪರ್ಕಿಸಿ, 50 ಸಾವಿರ ರೂಪಾಯಿ ನೀಡಿದರೆ ಟ್ರ್ಯಾಕ್ಟರ್ಗೆ 3 ಲಕ್ಷ ರೂಪಾಯಿ ಸಬ್ಸಿಡಿ ದೊರೆಯುತ್ತದೆ ಎಂದು ನಂಬಿಸಿ ಹಣ ಪಡೆದುಕೊಂಡಿದ್ದಾನೆ ಎನ್ನಲಾಗಿದೆ. ಕಳೆದ ಒಂದು ವರ್ಷದಿಂದ ರೈತರೊಂದಿಗೆ ಸಂಪರ್ಕದಲ್ಲಿದ್ದ ಆತ, “ನಿಮ್ಮ ಕೆಲಸ ಆಗಿದೆ, ಬಜೆಟ್ ಹಾಗೂ ಅಧಿವೇಶನ ಮುಗಿದ ಬಳಿಕ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ” ಎಂದು ಹೇಳಿ ಕಾಲಹರಣ ಮಾಡುತ್ತಿದ್ದನು. ನಂತರ ಎಲ್ಲಾ ಅಧಿವೇಶನಗಳು ಮುಗಿದ ಮೇಲೆ ತನ್ನ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ನಾಪತ್ತೆಯಾಗಿದ್ದಾನೆ. ಮೋಸವಾದುದು ತಿಳಿದ ಬಳಿಕ ಪರಮೇಶ್ವರಪ್ಪ, ಕಲ್ಲೇಶ್, ಚಂದ್ರಶೇಖರ್ ಸೇರಿದಂತೆ ಹಲವಾರು ರೈತರು ಸಖರಾಯಪಟ್ಟಣ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ಮುಂದುವರೆಸಿದ್ದಾರೆ.



