
ಬೆಂಗಳೂರು: ಎಲ್ನಿನೋ ಹವಾಮಾನ ವೈಪರೀತ್ಯದಿಂದ ದೇಶದಲ್ಲಿ ಮಳೆಯ ಕೊರತೆ ಉಂಟಾಗಿ ರಾಜ್ಯದಲ್ಲೂ ಬರ ಪರಿಸ್ಥಿತಿ ನಿರ್ಮಾಣವಾಗಿರುವ ಹಿನ್ನೆಲೆಯಲ್ಲಿ ವಿಧಾನಸೌಧ, ವಿಕಾಸಸೌಧ ಹಾಗೂ ಸಚಿವಾಲಯಗಳಲ್ಲೂ ನೀರು ಮತ್ತು ವಿದ್ಯುತ್ ಉಳಿತಾಯಕ್ಕೆ ರಾಜ್ಯ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಈ ಕುರಿತು ಆದೇಶ ಹೊರಡಿಸಿದ್ದು, ಸರ್ಕಾರಿ ಕಚೇರಿಗಳಲ್ಲಿ ನೀರು ಹಾಗೂ ವಿದ್ಯುತ್ ಅನಗತ್ಯವಾಗಿ ಪೋಲಾಗದಂತೆ ಅಧಿಕಾರಿಗಳು ಮತ್ತು ಸಿಬ್ಬಂದಿ ಕಡ್ಡಾಯವಾಗಿ ನಿಯಮಗಳನ್ನು ಪಾಲಿಸುವಂತೆ ಸೂಚಿಸಿದ್ದಾರೆ. ಕಳೆದ ಕೆಲ ದಿನಗಳಿಂದ ಕಚೇರಿ ಸಮಯ ಮುಗಿದ ಬಳಿಕವೂ ವಿದ್ಯುತ್ ದೀಪ, ಫ್ಯಾನ್, ಕಂಪ್ಯೂಟರ್ ಹಾಗೂ ಎಸಿ ಸಾಧನಗಳನ್ನು ಆಫ್ ಮಾಡದೇ ಬಿಡುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿರುವ ಹಿನ್ನೆಲೆಯಲ್ಲಿ ಈ ಆದೇಶ ಹೊರಡಿಸಲಾಗಿದೆ. ಆದೇಶದಂತೆ ಸಚಿವಾಲಯದಲ್ಲಿ ಸಾಧ್ಯವಾದಷ್ಟು ನೈಸರ್ಗಿಕ ಬೆಳಕನ್ನು ಬಳಸಬೇಕು. ಕಚೇರಿಗಳ ಕಿಟಕಿಗಳನ್ನು ತೆರೆದಿಟ್ಟು ಅಗತ್ಯವಿದ್ದಾಗ ಮಾತ್ರ ದೀಪ ಮತ್ತು ಫ್ಯಾನ್ಗಳನ್ನು ಬಳಸಬೇಕು. ಪ್ರತಿ ದಿನ ಸಂಜೆ 6 ಗಂಟೆಯ ನಂತರ ಹಾಗೂ ಬೆಳಿಗ್ಗೆ 6 ಗಂಟೆಗೆ ಪ್ರತಿ ಮಹಡಿಯ ಕಾವಲುಗಾರರು ಮತ್ತು ಭದ್ರತಾ ಸಿಬ್ಬಂದಿ ಅನಗತ್ಯವಾಗಿ ವಿದ್ಯುತ್ ದೀಪಗಳು ಉರಿಯುತ್ತಿವೆಯೇ ಎಂದು ಪರಿಶೀಲಿಸಿ ಖಚಿತಪಡಿಸಿಕೊಳ್ಳಬೇಕು. ಸಚಿವರು ಹಾಗೂ ಅಧಿಕಾರಿಗಳು ಕೊಠಡಿಯಲ್ಲಿ ಇಲ್ಲದ ಸಮಯದಲ್ಲಿ ಮತ್ತು ಕಚೇರಿ ಮುಕ್ತಾಯವಾದ ನಂತರ ಎಲ್ಲಾ ವಿದ್ಯುತ್ ಸಂಪರ್ಕಗಳ ಸ್ವಿಚ್ಗಳನ್ನು ಕಡ್ಡಾಯವಾಗಿ ಆಫ್ ಮಾಡಬೇಕು. ಕಚೇರಿಗೆ ಬೀಗ ಹಾಕುವ ಮುನ್ನ ಇದನ್ನು ಖಚಿತಪಡಿಸಿಕೊಳ್ಳುವ ಜವಾಬ್ದಾರಿ ಆಪ್ತ ಕಾರ್ಯದರ್ಶಿಗಳು ಹಾಗೂ ಭದ್ರತಾ ಸಿಬ್ಬಂದಿಯದ್ದಾಗಿರುತ್ತದೆ. ಅಧಿಕಾರಿಗಳ ಕಚೇರಿಗಳಲ್ಲಿನ ಎಸಿ ತಾಪಮಾನವನ್ನು ಕಡ್ಡಾಯವಾಗಿ 24 ರಿಂದ 26 ಡಿಗ್ರಿ ಸೆಲ್ಸಿಯಸ್ ನಡುವೆಯೇ ನಿರ್ವಹಿಸುವಂತೆ ಸೂಚಿಸಲಾಗಿದೆ. ಸಾಂಪ್ರದಾಯಿಕ ದೀಪಗಳ ಬದಲಿಗೆ ದೀರ್ಘಕಾಲ ಬಾಳಿಕೆ ಬರುವ ಎಲ್ಇಡಿ ದೀಪಗಳನ್ನು ಅಳವಡಿಸುವುದು, ಕಾರಿಡಾರ್, ವಿಶ್ರಾಂತಿ ಕೊಠಡಿ ಹಾಗೂ ಸಭಾಂಗಣಗಳಲ್ಲಿ ಚಲನಶೀಲ ಸಂವೇದಕ (ಮೋಷನ್ ಸೆನ್ಸರ್) ವ್ಯವಸ್ಥೆ ಅಳವಡಿಸುವಂತೆ ಸೂಚಿಸಲಾಗಿದೆ. ಶೌಚಾಲಯ ಹಾಗೂ ಕಚೇರಿಗಳಲ್ಲಿ ನಲ್ಲಿಗಳನ್ನು ಕಡ್ಡಾಯವಾಗಿ ಬಂದ್ ಮಾಡುವುದು, ನೀರಿನ ಹರಿವು ಕಡಿಮೆ ಮಾಡಲು ವಾಟರ್ ಏರೇಟರ್ಗಳನ್ನು ಅಳವಡಿಸುವುದು ಹಾಗೂ ನಲ್ಲಿಗಳಲ್ಲಿ ಸೋರಿಕೆ ಕಂಡುಬಂದರೆ ತಕ್ಷಣ ಲೋಕೋಪಯೋಗಿ ಇಲಾಖೆಯ ಗಮನಕ್ಕೆ ತರಬೇಕೆಂದು ನಿರ್ದೇಶಿಸಲಾಗಿದೆ. ಎಲ್ನಿನೋ ಪರಿಣಾಮದಿಂದ ಕೃಷಿ ವಲಯದ ಮೇಲೂ ತೀವ್ರ ಪರಿಣಾಮ ಉಂಟಾಗಿದ್ದು, ರಾಜ್ಯದ ಜಲಾಶಯಗಳಿಗೆ ಸಮರ್ಪಕ ಒಳಹರಿವು ಇಲ್ಲದ ಕಾರಣ ನೀರಿನ ಅಭಾವ ಎದುರಾಗಿದೆ. ಇಂತಹ ಪರಿಸ್ಥಿತಿಯಲ್ಲಿ ನೀರು ಮತ್ತು ವಿದ್ಯುತ್ನಂತಹ ಅಮೂಲ್ಯ ಸಂಪನ್ಮೂಲಗಳನ್ನು ಅಪವ್ಯಯ ಮಾಡದೆ ಮಿತವಾಗಿ ಬಳಸುವುದು ಪ್ರತಿಯೊಬ್ಬ ಅಧಿಕಾರಿಯ ಹಾಗೂ ಸಿಬ್ಬಂದಿಯ ಜವಾಬ್ದಾರಿಯಾಗಿದ್ದು, ಈ ಆದೇಶವನ್ನು ಸಚಿವಾಲಯದ ಎಲ್ಲಾ ಇಲಾಖೆಗಳು, ವಿಧಾನಸಭೆ ಮತ್ತು ವಿಧಾನ ಪರಿಷತ್ ಕಚೇರಿಗಳ ಅಧಿಕಾರಿಗಳು ಹಾಗೂ ಸಿಬ್ಬಂದಿ ಕಟ್ಟುನಿಟ್ಟಾಗಿ ಪಾಲಿಸುವಂತೆ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಸೂಚಿಸಿದ್ದಾರೆ.




