
ಬೆಂಗಳೂರು: ಸಿಎಂ ಡಿಕೆ ಶಿವಕುಮಾರ್ ಸಚಿವ ಸಂಪುಟ ವಿಸ್ತರಣೆಗೆ ಸಂಬಂಧಿಸಿದಂತೆ 20 ಜನರ ಹೆಸರನ್ನು ಒಳಗೊಂಡ ಪಟ್ಟಿ ಹೈಕಮಾಂಡ್ನಿಂದ ಬಿಡುಗಡೆ ಬೆನ್ನಲ್ಲೇ ಕಾಂಗ್ರೆಸ್ನಲ್ಲಿ ಅಸಮಾಧಾನ ವ್ಯಕ್ತವಾಗಿದ್ದು, ಮಂತ್ರಿಗಿರಿ ಸಿಗದಿದ್ದಕ್ಕೆ ಕೆಲ ಶಾಸಕರು ರಾಜೀನಾಮೆ ನೀಡೋದಾಗಿ ಅದಾಗಲೇ ಘೋಷಣೆ ಮಾಡಿದ್ದಾರೆ. ಆದರೆ ಪಕ್ಷದ ಶಾಸಕ ರಾಜೀನಾಮೆ ಬೆದರಿಕೆಯನ್ನು ಗಂಭೀರವಾಗಿ ಪರಿಗಣಿಸಿದ ವರಿಷ್ಠರು, ಸಿಎಂ ಡಿ.ಕೆ.ಶಿವಕುಮಾರ್ಗೆ ಕರೆ ಮಾಡಿ ಈ ಬಗ್ಗೆ ವಿವರ ಕೇಳಿದ್ದಾರೆ ಎನ್ನಲಾಗಿದ್ದು, ಸಚಿವ ಸ್ಥಾನ ಸಿಗದಿದ್ದವರಿಗೆ ನಿಗಮ ಮಂಡಳಿ ಕೊಡುತ್ತೇವೆ, ಅದನ್ನೂ ಮೀರಿ ರಾಜೀನಾಮೆ ನೀಡಿದರೆ ಅಂಗೀಕರಿಸಿ ಎಂದು ಸಿಎಂ ಡಿಕೆಶಿಗೆ ಸ್ಪಷ್ಟನೆ ನೀಡಿದ್ದಾರೆ ಎನ್ನಲಾಗಿದೆ. ಮಂತ್ರಿಗಿರಿ ಸಿಗದ್ದಕ್ಕೆ ಮುನಿಸಿಕೊಂಡಿರುವ ವಿಜಯಪುರ ಜಿಲ್ಲೆಯ ಇಂಡಿ ಶಾಸಕ ಯಶವಂತರಾಯಗೌಡ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಸ್ಪೀಕರ್ ರುದ್ರಪ್ಪ ಲಮಾಣಿಗೆ ರಾಜೀನಾಮೆ ಪತ್ರವನ್ನು ಅವರು ಸಲ್ಲಿಕೆ ಮಾಡಿದ್ದು, ಇತ್ತ ಸಾಗರ ಕ್ಷೇತ್ರದ ಶಾಸಕ ಬೇಳೂರು ಗೋಪಾಲಕೃಷ್ಣ ಕೂಡ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಾಳೆ ಬೆಳಗ್ಗೆ 10 ಗಂಟೆಗೆ ಶಾಸಕ ಸ್ಥಾನ ಹಾಗೂ ನಿಗಮ ಮಂಡಳಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಘೋಷಿಸಿದ್ದು, ಸಚಿವ ಸ್ಥಾನ ಸಿಗದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ಭದ್ರಾವತಿ ಎಂಎಲ್ಎ ಸಂಗಮೇಶ್, 30-40 ವರ್ಷಗಳಿಂದ ಪಕ್ಷಕ್ಕಾಗಿ ಕೆಲಸ ಮಾಡಿದ್ದೇನೆ. ಬಿಜೆಪಿಗರು 50 ಕೋಟಿ ಕೊಡ್ತೀನಿ ಅಂದ್ರೂ ಹೋಗಿಲ್ಲ. ಆದರೆ ಮಂತ್ರಿ ಮಾಡ್ತೀವಿ ಎಂದು ಹೇಳಿ ಮೋಸ ಮಾಡಿದ್ದಾರೆ. 136 ಸ್ಥಾನ ಇದೆ ಅಂತಾ ಕಾಂಗ್ರೆಸ್ಗೆ ಹಮ್ಮು ಬಂದಿದೆ. ನಾಳೆ ನನ್ನ ಕ್ಷೇತ್ರದ ಜನರ ಜೊತೆಗೆ ಸಭೆ ನಡೆಸುತ್ತೇನೆ. ಕ್ಷೇತ್ರದ ಜನ ಹೇಳಿದ್ರೆ ನಾನು ರಾಜೀನಾಮೆ ಕೊಡ್ತೇನೆ ಎಂದು ತಿಳಿಸಿದ್ದಾರೆ.




