
ಗಣೇಶ ಹಬ್ಬಕ್ಕೆ ಇನ್ನು ಕೆಲವೇ ದಿನಗಳು ಉಳಿದಿದ್ದು, ಈಗಾಗಲೇ ಈ ಬಾರಿ ಗಣೇಶ ಹಬ್ಬಕ್ಕೆ ಪಿಓಪಿ ಗಣೇಶ ಮೂರ್ತಿಗಳ ನಿಯಂತ್ರಣಕ್ಕೆ ಒತ್ತಡ ಹೆಚ್ಚಾಗಿದೆ. ಗಣೇಶ ಹಬ್ಬಕ್ಕೆ ಇನ್ನು ಕೆಲವು ದಿನಗಳು ಬಾಕಿ ಇರುವಾಗಲೇ ಪ್ಲಾಸ್ಟರ್ ಆಫ್ ಪ್ಯಾರಿಸ್ ಗಣೇಶ ಮೂರ್ತಿಗಳ ಬಳಕೆಯನ್ನು ತಡೆಗಟ್ಟುವಂತೆ ಬಿಜೆಪಿ ಶಾಸಕರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ರಾಜಾಜಿನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕರಾದ ಸುರೇಶ್ ಕುಮಾರ್ ಅವರು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣಬೈರೇಗೌಡ ಅವರಿಗೆ ಬಹಿರಂಗ ಪತ್ರ ಬರೆದು ಈ ಬಗ್ಗೆ ಗಂಭೀರವಾಗಿ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಪ್ರತಿ ವರ್ಷದಂತೆ ಈ ಬಾರಿಯೂ ಪಿಓಪಿ ಗಣೇಶ ಮೂರ್ತಿಗಳ ಹಾವಳಿ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಶಾಸಕರು ತಿಳಿಸಿದ್ದು, ಪಿಓಪಿ ಮೂರ್ತಿಗಳ ಬಳಕೆಯು ಜಲಮೂಲಗಳು ಮತ್ತು ಪರಿಸರಕ್ಕೆ ತುಂಬಾ ಹಾನಿ ಮಾಡುತ್ತವೆ ಎಂದು ಹೇಳಿದ್ದಾರೆ. ಗಣೇಶ ಹಬ್ಬದ ನಂತರ ಈ ಮೂರ್ತಿಗಳನ್ನು ಸರೋವರಗಳು, ಕೆರೆಗಳು ಮತ್ತು ನದಿಗಳಲ್ಲಿ ವಿಸರ್ಜಿಸುವುದರಿಂದ ನೀರು ಕಲುಷಿತವಾಗುತ್ತದೆ. ಇದು ಪರಿಸರಕ್ಕೆ ದೊಡ್ಡ ಹಾನಿ ಉಂಟುಮಾಡುತ್ತದೆ ಎಂದು ಈ ಮೂಲಕ ತಿಳಿಸಿದ್ದಾರೆ.




