ಸಾಲು ಸಾಲು ರಜೆಗಳ ಜೊತೆಗೆ ಬ್ಯಾಂಕ್ ನೌಕರರ ಮುಷ್ಕರದ ಬಿಸಿ ಗ್ರಾಹಕರಿಗೆ ತಟ್ಟಲಿದ್ದು, ಜನವರಿ 24ರಿಂದ 27ರವರೆಗೆ ನಾಲ್ಕು ದಿನ ಬ್ಯಾಂಕ್ ವ್ಯವಹಾರದಲ್ಲಿ ಭಾರಿ ವ್ಯತ್ಯಯ ಉಂಟಾಗಲಿದೆ. ಜನವರಿ 24 ನಾಲ್ಕನೇ ಶನಿವಾರ, 25 ಭಾನುವಾರ, 26 ಗಣರಾಜ್ಯೋತ್ಸವದ ರಜೆ ಇದ್ದು, ವಾರದಲ್ಲಿ ಐದು ದಿನ ಕೆಲಸದ ಅವಧಿ ಜಾರಿಗೊಳಿಸುವಂತೆ ಒತ್ತಾಯಿಸಿ ಬ್ಯಾಂಕ್ ಸಿಬ್ಬಂದಿ ಜನವರಿ 27ರಂದು ಮುಷ್ಕರಕ್ಕೆ ಕರೆ ನೀಡಿದ್ದಾರೆ. ಹೀಗಾಗಿ ಈ ನಾಲ್ಕು ದಿನಗಳ ಕಾಲ ಹಣ ವಿತ್ಡ್ರಾ, ಚೆಕ್ ಕ್ಲಿಯರೆನ್ಸ್, ಡಿಮ್ಯಾಂಡ್ ಡ್ರಾಫ್ಟ್ ಸೇರಿದಂತೆ ಶಾಖಾ ಆಧಾರಿತ ಬ್ಯಾಂಕ್ ಸೇವೆಗಳು ಸ್ಥಗಿತಗೊಳ್ಳಲಿದ್ದು, ಗ್ರಾಹಕರು ಸಮಸ್ಯೆ ಎದುರಿಸಬೇಕಾಗುತ್ತದೆ. ಆದರೆ ಮೊಬೈಲ್ ಬ್ಯಾಂಕಿಂಗ್ ಮತ್ತು ಇಂಟರ್ನೆಟ್ ಬ್ಯಾಂಕಿಂಗ್ ಸೇವೆಗಳು ಲಭ್ಯವಿರುತ್ತವೆ. ಕೆಲಸದ ಒತ್ತಡ ಕಡಿಮೆ ಮಾಡಿ ದಕ್ಷತೆ ಹೆಚ್ಚಿಸಲು ಐದು ದಿನಗಳ ವರ್ಕಿಂಗ್ ಡೇ ಅಗತ್ಯವೆಂದು ಯುನೈಟೆಡ್ ಫೋರಮ್ ಆಫ್ ಬ್ಯಾಂಕ್ ಯೂನಿಯನ್ಸ್ (UFBU) ವಾದಿಸಿದ್ದು, ಗ್ರಾಹಕ ಸೇವೆಗೆ ಅಡಚಣೆ ಆಗದಂತೆ ಸೋಮವಾರದಿಂದ ಶುಕ್ರವಾರದವರೆಗೆ ದಿನಕ್ಕೆ 40 ನಿಮಿಷ ಹೆಚ್ಚುವರಿ ಕೆಲಸ ಮಾಡುವ ಪ್ರಸ್ತಾಪವನ್ನೂ ಮುಂದಿಟ್ಟಿದೆ. ಬಹುತೇಕ ಸರ್ಕಾರಿ ಕಚೇರಿಗಳಲ್ಲಿ ಈಗಾಗಲೇ ವಾರಕ್ಕೆ ಎರಡು ದಿನ ರಜೆ ಜಾರಿಯಲ್ಲಿದ್ದು, ಹಲವು ಸಂಸ್ಥೆಗಳು ಎರಡು ವೀಕ್ಆಫ್ ವ್ಯವಸ್ಥೆಯನ್ನು ಅನುಸರಿಸುತ್ತಿವೆ. ಅದೇ ಮಾದರಿಯಲ್ಲಿ ಬ್ಯಾಂಕ್ ಕ್ಷೇತ್ರದಲ್ಲಿಯೂ ವಾರಕ್ಕೆ ಎರಡು ದಿನ ರಜೆ ನೀಡಬೇಕು ಎಂಬುದು ಬ್ಯಾಂಕ್ ಉದ್ಯೋಗಿಗಳ ಪ್ರಮುಖ ಆಗ್ರಹವಾಗಿದೆ.
