
ಚಿಕ್ಕಮಗಳೂರು : ದನಗಳ್ಳರ ಕಾರನ್ನು ಸಿನಿಮೀಯ ಶೈಲಿಯಲ್ಲಿ ಬೆನ್ನಟ್ಟಿದ ಕಳಸ ಪೊಲೀಸರು ಹಸುವನ್ನು ರಕ್ಷಿಸಿ, ದನಗಳ್ಳರ ಕಾರನ್ನು ವಶಕ್ಕೆ ಪಡೆದಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಕಳಸ–ಹೊರನಾಡು ಮಾರ್ಗದಲ್ಲಿ ನಡೆದಿದೆ. ಅನುಮಾನಾಸ್ಪದವಾಗಿ ಹಸುವನ್ನು ಸಾಗಿಸುತ್ತಿದ್ದ ಇನೋವಾ ಕಾರನ್ನು ಪೊಲೀಸರು ಬೆನ್ನಟ್ಟಿದ ವೇಳೆ, ಪೊಲೀಸರನ್ನು ಕಂಡು ಆತಂಕಗೊಂಡ ದನಗಳ್ಳರು ಕಾರನ್ನು ವೇಗವಾಗಿ ಚಲಾಯಿಸಿ ಪರಾರಿಯಾಗಲು ಯತ್ನಿಸಿದ್ದಾರೆ. ಸಿನಿಮೀಯ ರೀತಿಯಲ್ಲಿ ನಡೆದ ಚೇಸಿಂಗ್ ಬಳಿಕ ಆರೋಪಿಗಳು ಕಾರನ್ನು ತೋಟದೊಳಗೆ ನುಗ್ಗಿಸಿ ಅಲ್ಲೇ ಬಿಟ್ಟು ಕಾಲ್ನಡಿಗೆಯಲ್ಲೇ ಪರಾರಿಯಾಗಿದ್ದಾರೆ. ಬಳಿಕ ಪೊಲೀಸರು ಸ್ಥಳಕ್ಕೆ ತೆರಳಿ ಇನೋವಾ ಕಾರು ಹಾಗೂ ಹಸುವನ್ನು ವಶಕ್ಕೆ ಪಡೆದಿದ್ದಾರೆ. ರಕ್ಷಿಸಲಾದ ಹಸುವನ್ನು ಕಳಸ ಪೊಲೀಸ್ ಠಾಣೆ ಆವರಣದ ಬಳಿಯೇ ಕಟ್ಟಿಹಾಕಿ ಸುರಕ್ಷಿತವಾಗಿ ಇರಿಸಲಾಗಿದೆ. ಈ ಸಂಬಂಧ ಕಳಸ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪರಾರಿಯಾಗಿರುವ ದನಗಳ್ಳರ ಪತ್ತೆಗಾಗಿ ಪೊಲೀಸರು ಶೋಧ ಕಾರ್ಯವನ್ನು ಮುಂದುವರಿಸಿದ್ದಾರೆ.




