
ಕಾರ್ಕಳ : ಉದ್ಯೋಗಾಕಾಂಕ್ಷಿಗಳು ಆತ್ಮವಿಶ್ವಾಸದಿಂದ ಸಂದರ್ಶನ ಎದುರಿಸಿ ಉತ್ತಮ ಉದ್ಯೋಗದೊಂದಿಗೆ ತಮ್ಮ ಭವಿಷ್ಯವನ್ನು ಭದ್ರಪಡಿಸಿಕೊಳ್ಳಬೇಕು ಎಂದು ಶಾಸಕ ವಿ. ಸುನಿಲ್ ಕುಮಾರ್ ಹೇಳಿದರು. ಅವರು ಜು. 9ರಂದು ವಿಕಾಸ ಉದ್ಯೋಗ ಸೇತು ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಜು. 9 ಎಬಿವಿಪಿ ಸಂಸ್ಥಾಪನಾ ದಿನವಾಗಿದ್ದು, ಎಬಿವಿಪಿಯಲ್ಲಿ ತೊಡಗಿಸಿಕೊಂಡಿದ್ದ ಸಂದರ್ಭದಲ್ಲಿ ರಾಷ್ಟ್ರೀಯ ವಿಚಾರಧಾರೆಯನ್ನು ಮೈಗೂಡಿಸಿಕೊಂಡಿದ್ದೆ ಎಂದು ತಿಳಿಸಿದ ಅವರು, ವಿಕಾಸ ಸೇವಾ ಸಂಸ್ಥೆಯು ಕಾರ್ಕಳ ಹಾಗೂ ಹೆಬ್ರಿ ತಾಲೂಕಿನ ಜನತೆಗೆ ಉದ್ಯೋಗ ದೊರಕಿಸಿಕೊಡುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲಿದೆ ಎಂದರು. ಈ ಶಿಬಿರದಲ್ಲಿ ಉದ್ಯೋಗ ದೊರೆಯದಿದ್ದರೂ ನಿರಾಶರಾಗಬಾರದು. ವಿಕಾಸ ಸೇವಾ ಕಚೇರಿ ಯುವ ಸಮುದಾಯಕ್ಕಾಗಿ ಸದಾ ಮುಕ್ತವಾಗಿದ್ದು, ಉದ್ಯೋಗಕ್ಕೆ ಸಂಬಂಧಿಸಿದ ಯಾವುದೇ ಸಹಾಯಕ್ಕಾಗಿ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಹಿರಿಯ ಉದ್ಯಮಿ ಹಾಗೂ ಬಿಜೆಪಿ ಮುಖಂಡ ಬೋಳ ಪ್ರಭಾಕರ ಕಾಮತ್, ಉದ್ಯಮಿ ಗಣೇಶ್ ಕಾಮತ್, ಗೇರು ನಿಗಮದ ಮಾಜಿ ಅಧ್ಯಕ್ಷ ಮಣಿರಾಜ ಶೆಟ್ಟಿ, ಕ್ಷೇತ್ರಾಧ್ಯಕ್ಷ ನವೀನ್ ನಾಯಕ್, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಮಹಾವೀರ ಹೆಗ್ಡೆ, ಸ್ಪೆಟ್ರಂ ಕಂಪನಿಯ ದಿವಾಕರ್ ಹಾಗೂ ಫಾಕ್ಸ್ ಕಾಂ ಕಂಪನಿಯ ರಾಜೇಶ್ವರಿ ಉಪಸ್ಥಿತರಿದ್ದರು. ಶಿಬಿರದಲ್ಲಿ 1,600 ಮಂದಿ ನೋಂದಣಿ ಮಾಡಿಕೊಂಡಿದ್ದು, 25 ಕಂಪನಿಗಳು ಭಾಗವಹಿಸಿದ್ದವು. ಸುಮಾ ರವಿಕಾಂತ್ ಪ್ರಾರ್ಥನೆ ನೆರವೇರಿಸಿದರು. ಪ್ರಸಾದ್ ಐಸಿರ ಸ್ವಾಗತಿಸಿದರು. ಸಾಣೂರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಕರುಣಾಕರ್ ಕೋಟ್ಯಾನ್ ಕಾರ್ಯಕ್ರಮ ನಿರೂಪಿಸಿದರು.
ಈ ಸುದ್ದಿಯ ಸಂಪೂರ್ಣ ವಿಡಿಯೋವನ್ನು YouTube ನಲ್ಲಿ ವೀಕ್ಷಿಸಲು ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ.
ವರದಿ : ಅರುಣ್ ಭಟ್ ಕಾರ್ಕಳ




