
ಮಂಡ್ಯ: 2028ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬರುವುದು ಖಚಿತವಾಗಿದ್ದು, ಅಧಿಕಾರ ಸಾಧನೆಯೇ ಪ್ರಮುಖ ಗುರಿ, ಸಿಎಂ ಯಾರು ಎಂಬುದು ಅಷ್ಟಾಗಿ ಮುಖ್ಯವಲ್ಲ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಹೇಳಿದರು. ಆದಿಚುಂಚನಗಿರಿ ಕ್ಷೇತ್ರಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಲಿರುವ ಹಿನ್ನೆಲೆಯಲ್ಲಿ ಇಂದು ಸ್ಥಳಕ್ಕೆ ಆಗಮಿಸಿ ನಿರ್ಮಲಾನಂದನಾಥ ಸ್ವಾಮೀಜಿಗಳೊಂದಿಗೆ ಸಿದ್ಧತೆ ಪರಿಶೀಲಿಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಬಿಜೆಪಿಯಲ್ಲಿ ಮುಖ್ಯಮಂತ್ರಿ ಹುದ್ದೆಗೆ ಹಲವು ಆಕಾಂಕ್ಷಿಗಳಿದ್ದು, ತಮ್ಮ ಹೆಸರನ್ನೂ ಸೇರಿಸಿ ಸುಮಾರು 10 ಮಂದಿಯ ಹೆಸರುಗಳು ಕೇಳಿಬರುತ್ತಿವೆ ಎಂದರು. 2028ರಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬರುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ ಅವರು, ಕೇಂದ್ರದಲ್ಲಿರುವಂತೆ ರಾಜ್ಯದಲ್ಲೂ ಮೈತ್ರಿ ಮುಂದುವರಿಯಲಿದೆ ಎಂದು ತಿಳಿಸಿದರು. ಸಿಎಂ ಆಯ್ಕೆ ಕುರಿತು ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಸೇರಿದಂತೆ ಪಕ್ಷದ ನಾಯಕರು ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದರು. ಇದೇ ವೇಳೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವನ್ನು ಟೀಕಿಸಿದ ಅವರು, ಸಿಎಂ ಬದಲಾವಣೆ ವಿಚಾರವು ಅವಧಿ ಮುಗಿದ ಔಷಧಿಯಂತಾಗಿದ್ದು, ಕಳೆದ ಎರಡು ವರ್ಷಗಳಿಂದ ಸರ್ಕಾರದಲ್ಲಿ ಅಸ್ಥಿರತೆ ಮುಂದುವರಿದಿದೆ ಎಂದು ಹೇಳಿದರು. ಡಿ.ಕೆ. ಶಿವಕುಮಾರ್ ಸಿಎಂ ಸ್ಥಾನಕ್ಕಾಗಿ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿ ಒತ್ತಡ ತರುತ್ತಿದ್ದಾರೆ ಎಂದು ಆರೋಪಿಸಿದ ಅವರು, ಕಾಂಗ್ರೆಸ್ನಲ್ಲಿ ಒಳಜಗಳ ಹೆಚ್ಚಾಗಿ ಶಾಸಕರು ನಾಯಕತ್ವದ ಮಾತಿಗೆ ಬೆಲೆ ನೀಡುತ್ತಿಲ್ಲ, ಸಿಎಂ ಮತ್ತು ಸಚಿವ ಸ್ಥಾನಗಳ ಆಸೆಯಿಂದ ಕಲಹ ಮುಂದುವರಿದಿದೆ ಎಂದು ಲೇವಡಿಗೈದರು.



